ನವದೆಹಲಿ: ಎರಡು ವರ್ಷಗಳ ಹಿಂದೆ ಸಹ ಪೊಲೀಸ್ ಕಾನ್‌ಸ್ಟೆಬಲ್‌ಗೆ ಕ್ರೂರ ಮತ್ತು ಅಮಾನವೀಯ ಕಸ್ಟಡಿ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ 8 ಪೊಲೀಸರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಅವರನ್ನು ಕಸ್ಟಡಿಗೆ ನೀಡುವಂತೆ ಸಿಬಿಐ ಶ್ರೀನಗರ ವಿಶೇಷ ನ್ಯಾಯಾಲಯಕ್ಕೆ ಕೋರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕವಸ್ತು ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಶಂಕೆ ಮೇಲೆ ಕಾನ್‌ಸ್ಟೆಬಲ್ ಖುರ್ಷೀದ್ ಅಹ್ಮದ್ ಚೋಹನ್ ಅವರನ್ನು ಆರು ದಿನಗಳ ಕಾಲ ಹಿಂಸಿಸಿದ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ತೀವ್ರ ವಿಚಾರಣೆಯ ನಂತರ ವಶಕ್ಕೆ ಪಡೆದ ಎಂಟು ಅಧಿಕಾರಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಉಪ ಪೊಲೀಸ್ ವರಿಷ್ಠಾಧಿಕಾರಿ ಐಜಾಜ್ ಅಹ್ಮದ್ ನಾಯ್ಕೊ ಮತ್ತು ಇತರ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಎಂಟು ಮಂದಿಯನ್ನು ಕುಪ್ವಾರಾದ ಜಂಟಿ ವಿಚಾರಣಾ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಚೋಹನ್ ವಿರುದ್ಧದ ಅಮಾನವೀಯ ವರ್ತನೆಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ತನಿಖೆಯಲ್ಲಿ ಅಸಹಕಾರ ತೋರಿದ್ದಕ್ಕಾಗಿ ಸಿಬಿಐ ಇನ್ನೂ ಇಬ್ಬರು ಪೊಲೀಸ್ ಸಿಬ್ಬಂದಿಯ ಪಾತ್ರವನ್ನು ಪತ್ತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಡಿಎಸ್‌ಪಿ ನಾಯ್ಕೊ ವರಲ್ಲದೆ, ಸಬ್ ಇನ್ಸ್‌ಪೆಕ್ಟರ್ ರಿಯಾಜ್ ಅಹ್ಮದ್ ಮತ್ತು ಇತರ ಆರು ಜನರನ್ನು ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನ ಸೇರಿದಂತೆ ಇತರ ಆರೋಪಗಳ ಮೇಲೆ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಾರಾಮುಲ್ಲಾದಲ್ಲಿ ನಿಯೋಜನೆಗೊಂಡಿದ್ದ ಸಂತ್ರಸ್ತನನ್ನು 2023ರ ಫೆಬ್ರುವರಿ 17ರಂದು ಕುಪ್ವಾರಾ ಎಸ್‌ಎಸ್‌ಪಿ ಮುಂದೆ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಹಾಜರಾಗಲು ಸೂಚಿಸಲಾಗಿತ್ತು.
ಅಲ್ಲಿಗೆ ಆಗಮಿಸಿದ ಸಂತ್ರಸ್ತನನ್ನು ಜಂಟಿ ವಿಚಾರಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿತ್ತು. ಅಲ್ಲಿ ನಾಯ್ಕೊ, ರಿಯಾಜ್ ಅಹ್ಮದ್ ಮತ್ತು ಇತರರು ಖುರ್ಷಿದ್‌ಗೆ ಆರು ದಿನಗಳ ಕಾಲ ಕಬ್ಬಿಣದ ರಾಡ್‌ಗಳು ಮತ್ತು ದೊಣ್ಣೆಗಳಿಂದ ಚಿತ್ರಹಿಂಸೆ ನೀಡಿದ್ದಾರೆ, ಜೊತೆಗೆ ಭಾರೀ ವಿದ್ಯುತ್ ಶಾಕ್‌ಗಳನ್ನು ನೀಡಿ ಮರ್ಮಾಂಗವನ್ನು ಕತ್ತರಿಸಲಾಗಿದೆ ಎಂದು ಪತ್ನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಇದು ಈಗ ಎಫ್‌ಐಆರ್‌ನ ಭಾಗವಾಗಿದೆ.
‘2023ರ ಫೆಬ್ರುವರಿ 26ರಂದು ಖುರ್ಷಿದ್ ಅವರ ಖಾಸಗಿ ಭಾಗಗಳನ್ನು ಕತ್ತರಿಸಲಾಗಿದೆ. ಜೊತೆಗೆ ಆರು ದಿನಗಳ ಕಾಲ ನಿರಂತರವಾಗಿ ಅವರ ಖಾಸಗಿ ಭಾಗದಲ್ಲಿ ಕಬ್ಬಿಣದ ಸರಳುಗಳನ್ನು ಹಾಕಲಾಗಿದೆ. ಖುರ್ಷಿದ್ ಅವರನ್ನು ತೀವ್ರ ಚಿತ್ರಹಿಂಸೆಗೆ ಒಳಪಡಿಸಲಾಗಿದೆ. ಅವರ ಗುದನಾಳಕ್ಕೆ ಕೆಂಪು ಮೆಣಸನ್ನು ಹಾಕಿ ವಿದ್ಯುತ್ ಶಾಕ್‌ಗಳನ್ನು ಸಹ ನೀಡಲಾಗಿದೆ’ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಖುರ್ಷೀದ್ ಅವರನ್ನು 2023ರ ಫೆಬ್ರುವರಿ 26ರಂದು ಮಧ್ಯಾಹ್ನ 2.48ಕ್ಕೆ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕತ್ತರಿಸಿದ ಜನನಾಂಗವನ್ನು ಸಬ್ ಇನ್ಸ್‌ಪೆಕ್ಟರ್ ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ಆಸ್ಪತ್ರೆಗೆ ತಂದಿದ್ದರು ಎಂಬುದು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದೆ’ ಎಂದು ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಾಗ ಹೇಳಿತ್ತು.
ಖುರ್ಷೀದ್ ಪತ್ನಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.