ADVERTISEMENT

ಬಾಂಗ್ಲಾ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ: ನಾಲ್ವರ ವಿರುದ್ಧ ಸಿಬಿಐ ಪ್ರಕರಣ

ಪಿಟಿಐ
Published 23 ಸೆಪ್ಟೆಂಬರ್ 2020, 14:13 IST
Last Updated 23 ಸೆಪ್ಟೆಂಬರ್ 2020, 14:13 IST
ಸಿಬಿಐ ಲಾಂಛನ
ಸಿಬಿಐ ಲಾಂಛನ   

ನವದೆಹಲಿ: ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರಗಳ ಕಳ್ಳಸಾಗಣೆ, ಮಾರಾಟ ಆರೋಪದ ಮೇಲೆ ಬಿಎಸ್‌ಎಫ್‌ನ ಅಧಿಕಾರಿ ಹಾಗೂ ಇತರ ಮೂವರ ವಿರುದ್ಧ ಸಿಬಿಐ ಬುಧವಾರ ಪ್ರಕರಣ ದಾಖಲಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ, ದೆಹಲಿ, ಪಶ್ಚಿಮ ಬಂಗಾಳದ ಕೋಲ್ಕತ್ತ, ಸಿಲಿಗುರಿ, ಮುರ್ಷಿದಾಬಾದ್‌, ಉತ್ತರ ಪ್ರದೇಶದ ಗಾಜಿಯಾಬಾದ್‌, ಪಂಜಾಬ್‌ನ ಅಮೃತಸರ್, ಛತ್ತೀಸಗಡದ ರಾಯಪುರದಲ್ಲಿ ಒಟ್ಟು 15 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದರು.

36 ಬಿಎಸ್‌ಎಫ್‌ ಬೆಟಾಲಿಯನ್‌ನ ಮಾಜಿ ಕಮಾಂಡಂಟ್ ಸತೀಶ್‌ಕುಮಾರ್‌, ಜಾನುವಾರುಗಳ ಕಳ್ಳಸಾಗಣೆ ಜಾಲದ ಸೂತ್ರಧಾರಿ ಎನ್ನಲಾದ ಇಮ್ಯಾನುಯೆಲ್‌ ಹಕ್‌ ಹಾಗೂ ಅನರುಲ್‌ ಎಸ್‌.ಕೆ ಮತ್ತು ಮೊಹಮ್ಮದ್‌ ಗುಲಾಂ ಮುಸ್ತಫಾ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸತೀಶ್‌ ಕುಮಾರ್‌ ಅವರು ಪ್ರಸ್ತುತ ರಾಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

2018ರ ಜನವರಿಯಲ್ಲಿ, ಬಿಎಸ್‌ಎಫ್‌ ಕಮಾಂಡಂಟ್‌ ಜಿಬು ಟಿ.ಮ್ಯಾಥ್ಯೂ ಎಂಬುವವರಿಗೆ ಅಲಪ್ಪುಳ ರೈಲು ನಿಲ್ದಾಣದಲ್ಲಿ ಹಕ್‌ ಲಂಚ ನೀಡುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಮ್ಯಾಥ್ಯೂ ಅವರನ್ನು ಬಂಧಿಸಿ, ₹ 47 ಲಕ್ಷ ವಶಪಡಿಸಿಕೊಂಡಿದ್ದರು. ನಂತರ ಅದೇ ವರ್ಷ ಮಾರ್ಚ್‌ನಲ್ಲಿ ಹಕ್‌ನನ್ನು ಬಂಧಿಸಿದ್ದರು.

ಇದಾದ ನಂತರ, ಸರ್ಕಾರಿ ಅಧಿಕಾರಿಗಳೊಂದಿಗೆ ಹಕ್‌ ಹೊಂದಿರುವ ನಂಟಿನ ಬಗ್ಗೆ ತನಿಖೆ ಕೈಗೊಂಡಿದ್ದ ಸಿಬಿಐ, ಬಾಂಗ್ಲಾದೇಶದ ಗಡಿಯಲ್ಲಿ ಜಾನುವಾರುಗಳ ಕಳ್ಳಸಾಗಣೆ, ಅಕ್ರಮ ಮಾರಾಟ ನಡೆಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಈ ಕಳ್ಳಸಾಗಣೆ ಜಾಲದಲ್ಲಿ ಬಿಎಸ್‌ಎಫ್‌ ಹಾಗೂ ಕಸ್ಟಮ್ಸ್‌ ಅಧಿಕಾರಿಗಳು ಷಾಮೀಲಾಗಿರುವುದು ತನಿಖೆಯಿಂದ ದೃಢಪಟ್ಟಿತು.

ಸತೀಶ್‌ಕುಮಾರ್‌ 2015ರ ಡಿಸೆಂಬರ್‌ನಿಂದ 2017ರ ಏಪ್ರಿಲ್‌ ವರೆಗೆ ಮಾಲ್ಡಾ ಜಿಲ್ಲೆಯಲ್ಲಿ ಕಮಾಂಡಂಟ್‌ ಆಗಿ ಕರ್ತವ್ಯದಲ್ಲಿದ್ದಾಗ, ಕಳ್ಳಸಾಗಣೆಯಾಗುತ್ತಿದ್ದ 20,000 ಹಸುಗಳನ್ನು ರಕ್ಷಿಸಿ, ವಶಕ್ಕೆ ಪಡೆದಿದ್ದರು.

ಕಳ್ಳಸಾಗಣೆ ಮಾಡುತ್ತಿದ್ದವರ ಬಂಧನ, ವಾಹನಗಳನ್ನು ಜಪ್ತಿ ಮಾಡುತ್ತಿರಲಿಲ್ಲ. ನಂತರ, ಅತ್ಯಂತ ಕಡಿಮೆ ಹಣಕ್ಕೆ ಹರಾಜಿನಲ್ಲಿ ಈ ಹಸುಗಳನ್ನು ಆರೋಪಿಗಳು ಖರೀದಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಹಕ್‌, ಪ್ರತಿ ಹಸುಗೆ ಸಂಬಂಧಿಸಿ ಬಿಎಸ್‌ಎಫ್‌ ಅಧಿಕಾರಿಗಳಿಗೆ ₹ 2,000, ಕಸ್ಟಮ್ಸ್‌ ಅಧಿಕಾರಿಗಳಿಗೆ ₹ 500‍ಪಾವತಿಸುತ್ತಿದ್ದ ಎಂಬುದು ಸಿಬಿಐ ನಡೆಸಿದ ತನಿಖೆಯಲ್ಲಿ ದೃಢಪಟ್ಟಿತ್ತು.

ಹಕ್‌ ನಡೆಸುತ್ತಿದ್ದ ಕಂಪನಿಯೊಂದರಲ್ಲಿ ಸತೀಶ್‌ಕುಮಾರ್ ಪುತ್ರನಿಗೆ ಉದ್ಯೋಗವನ್ನೂ ನೀಡಲಾಗಿತ್ತು. ಆತನಿಗೆ ತಿಂಗಳಿಗೆ ₹ 30,000 –₹ 40,000 ವೇತನ ನೀಡಲಾಗುತ್ತಿತ್ತು ಎಂದೂ ಸಿಬಿಐ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.