ADVERTISEMENT

ಕೋಲ್ಕತ್ತ ಪೊಲೀಸ್ ಆಯುಕ್ತರನ್ನು ವಿಚಾರಣೆ ಮಾಡಬಹುದು, ಬಂಧಿಸುವಂತಿಲ್ಲ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 6:38 IST
Last Updated 5 ಫೆಬ್ರುವರಿ 2019, 6:38 IST
   

ಕೋಲ್ಕತ್ತ:ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದ ವಿಚಾರಣೆಗೆ ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಜತೆ ಸಹಕರಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.ಅದೇ ವೇಳೆ ಸಿಬಿಐ, ರಾಜೀವ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಬಹುದು ಆದರೆ ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಬಗ್ಗೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಮತ್ತು ಡಿಜಿಪಿ ಅವರುಫೆಬ್ರುವರಿ 18ಕ್ಕಿಂತ ಮುನ್ನ ಪ್ರತಿಕ್ರಿಯೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಮಂಗಳವಾರ ಹೇಳಿದೆ.

ನ್ಯಾಯಾಲಯದ ತೀರ್ಪು ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಇದು ನೈತಿಕ ಗೆಲುವು .ವಿಚಾರಣೆಗೆ ಸಹಕರಿಸುವುದಿಲ್ಲ ಎಂದು ರಾಜೀವ್ ಕುಮಾರ್ ಯಾವತ್ತೂ ಹೇಳಲಿಲ್ಲ. ಆದರೆ ಸಿಬಿಐ ಅವರನ್ನು ಬಂಧಿಸುವುದಕ್ಕಾಗಿಯೇ ಬಂದಿತ್ತು.ನ್ಯಾಯಾಲಯ ಬಂಧಿಸಬಾರದು ಎಂದು ಹೇಳಿದೆ ಎಂದಿದ್ದಾರೆ.

ADVERTISEMENT

ಸಿಬಿಐ ತಂಡ ಚಿಟ್ ಫಂಡ್ ಹಗರಣದ ವಿಚಾರಣೆಗಾಗಿ ಭಾನುವಾರ ರಾತ್ರಿ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಬಂದಾಗ, ಕೋಲ್ಕತ್ತ ಪೊಲೀಸರು ಸಿಬಿಐ ಅಧಿಕಾರಿಗಳನ್ನೇ ವಶ ಪಡಿಸಿದ್ದರು.

ಕುಮಾರ್ ಅವರ ಶಿಲೋಂಗ್‍ನಲ್ಲಿ ಹಾಜರಾಗಬೇಕಿದೆ. ಪ್ರಧಾನ ಕಾರ್ಯದರ್ಶಿ ಮತ್ತು ಡಿಜಿಪಿ ಅವರು ಪ್ರತಿಕ್ರಿಯೆ ಸಲ್ಲಿಸಿದ ನಂತರ ರಾಜೀವ್ ಕುಮಾರ್ ಖುದ್ದಾಗಿ ಹಾಜರಾಗಲು ನ್ಯಾಯಾಲಯ ಹೇಳಬಹುದು.ಫೆಬ್ರುವರಿ 19ರ ನಂತರವೇ ಹೀಗೆ ಖುದ್ದಾಗಿ ಹಾಜರಾಗಲು ಹೇಳುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.ಈ ಅರ್ಜಿ ವಿಚಾರಣೆ ಮಂಗಳವಾರ ನಡೆದಿದೆ. ಸಿಬಿಐ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ಸಂವಿಧಾನ ವ್ಯವಸ್ಥೆಗೆ ಧಕ್ಕೆಯುಂಟುಮಾಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.