ಸಿಬಿಐ
ನವದೆಹಲಿ: ಯುಜಿಸಿ– ಎನ್ಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಡಾರ್ಕ್‌ನೆಟ್‌ನಲ್ಲಿ ಸೋರಿಕೆಯಾಗಿ, ಟೆಲಿಗ್ರಾಂ ಆ್ಯಪ್ ಮೂಲಕ ಹಂಚಿಕೆಯಾದ ಆರೋಪದಡಿ ದಾಖಲಾಗಿದ್ದ ಪ್ರಕರಣ ಸಾಬೀತುಪಡಿಸಲು ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ಸಿಬಿಐ, ಮುಕ್ತಾಯದ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವರದಿಯನ್ನು ಅಂಗೀಕರಿಸಿ ಪ್ರಕರಣ ಮುಕ್ತಾಯಗೊಳಿಸುವ ಅಥವಾ ಪ್ರಕರಣ ಕುರಿತು ಮತ್ತಷ್ಟು ತನಿಖೆ ನಡೆಸುವ ನಿರ್ಧಾರವನ್ನು ನ್ಯಾಯಾಲಯ ಕೈಗೊಳ್ಳಬೇಕಿದೆ.
2024ರ ಜೂನ್ 18ರಂದು ಪ್ರಶ್ನೆಪತ್ರಿಕೆಯ ಸ್ಕ್ರೀನ್‌ಶಾಟ್‌ಗಳನ್ನು ಕೆಲ ವಿದ್ಯಾರ್ಥಿಗಳು ಹಣ ಗಳಿಕೆಗಾಗಿ ಎಲ್ಲೆಡೆ ಹಂಚಿಕೊಂಡಿದ್ದರು. ಪರೀಕ್ಷಾ ದಿನ ಮಧ್ಯಾಹ್ನ 2ನೇ ಪತ್ರಿಕೆಯ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಚಿತ್ರಗಳು ಟೆಲಿಗ್ರಾಂ ಚಾನಲ್‌ಗಳಲ್ಲಿ ಹರಿದಾಡಿತು. ಯಾರು ಪ್ರಶ್ನೆಪತ್ರಿಕೆ ಉಸ್ತುವಾರಿ ವಹಿಸಿದ್ದರೋ, ಅವರಿಂದಲೇ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು.
ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕಿರಿಯ ಸಂಶೋಧಕ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕ ಮತ್ತು ಪಿಎಚ್‌ಡಿ ಪ್ರವೇಶಕ್ಕೆ ನಡೆಸಲಾಗುವ ಈ ಪರೀಕ್ಷೆಗೆ 11 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷಾ ದಿನವೇ ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿ ಹೊರಬಿದ್ದಿತ್ತು. ಆದರೆ ಹಂಚಿಕೆಯಾದ ಚಿತ್ರವನ್ನು ಎಡಿಟ್ ಮಾಡಲಾಗಿತ್ತು ಎಂದೆನ್ನಲಾಗಿತ್ತು.
ರಾಷ್ಟ್ರೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಅಪಾಯ ವಿಶ್ಲೇಷಣಾ ವಿಭಾಗ ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ಜೂನ್ 19ರಂದು ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿತು. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಆದರೆ ಹೀಗೆ ಹಂಚಿಕೊಳ್ಳಲಾದ ಪ್ರಶ್ನೆಪತ್ರಿಕೆಯನ್ನು ಶಾಲಾ ವಿದ್ಯಾರ್ಥಿಯೊಬ್ಬ ಎಡಿಟ್ ಆ್ಯಪ್ ಬಳಸಿ ಸಿದ್ಧಪಡಿಸಿದ್ದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದರು. ವಿಧಿವಿಜ್ಞಾನ ಪ್ರಯೋಗಾಲಯವೂ ಇದನ್ನು ಖಚಿತಪಡಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.