ADVERTISEMENT

ವಂಚನೆ: ಪ್ರಕರಣ ದಾಖಲಿಸಲು ಸಿಬಿಐಗೆ ಸುಪ್ರೀಂ ಅನುಮತಿ

ಬಿಲ್ಡರ್‌ಗಳ ವಿರುದ್ಧ 1,200ಕ್ಕೂ ಹೆಚ್ಚು ಮನೆ ಖರೀದಿದಾರರಿಂದ ದೂರು

ಪಿಟಿಐ
Published 23 ಸೆಪ್ಟೆಂಬರ್ 2025, 14:33 IST
Last Updated 23 ಸೆಪ್ಟೆಂಬರ್ 2025, 14:33 IST
ಸುಪ್ರೀಂಕೋರ್ಟ್‌ 
ಸುಪ್ರೀಂಕೋರ್ಟ್‌    

ನವದೆಹಲಿ: ಬ್ಯಾಂಕ್‌ಗಳು ಮತ್ತು ರಿಯಲ್ ಎಸ್ಟೇಟ್‌ ಡೆವಲಪರ್‌ಗಳು ‘ಅಪವಿತ್ರ ಮೈತ್ರಿ’ಯ ಮೂಲಕ ಮನೆ ಖರೀದಿದಾರರನ್ನು ವಂಚಿಸಿದ ಪ್ರಕರಣದಲ್ಲಿ ಇನ್ನೂ 6 ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಸಿಬಿಐಗೆ ಸುಪ್ರೀಂಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ. 

ಮುಂಬೈ, ಬೆಂಗಳೂರು, ಕೋಲ್ಕತ್ತ, ಮೊಹಾಲಿ ಮತ್ತು ಪ್ರಯಾಗ್‌ರಾಜ್‌ನಲ್ಲಿ ಕೆಲವು ರಿಯಲ್‌ ಎಸ್ಟೇಟ್‌ ಯೋಜನೆಗಳಲ್ಲಿ ಈ ರೀತಿಯ ಅಪವಿತ್ರ ಮೈತ್ರಿಯ ಮೂಲಕ ತಮ್ಮನ್ನು ವಂಚಿಸಲಾಗಿದೆ ಎಂದು ಆರೋಪಿಸಿ 1,200ಕ್ಕೂ ಹೆಚ್ಚು ಮನೆ ಖರೀದಿದಾರರು ಸಲ್ಲಿಸಿದ್ದ ‌ಗುಂಪು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸಿತು. 

ಸೂರ್ಯ ಕಾಂತ್‌, ಉಜ್ಜಲ್‌ ಭುಯಾನ್‌ ಮತ್ತು ಎನ್‌. ಕೋಟೀಶ್ವರ್‌ ಸಿಂಗ್‌ ಅವರನ್ನೊಳಗೊಂಡ ಪೀಠವು, ಸಿಬಿಐಗೆ ಕಾನೂನಿನ ಅನ್ವಯ ಮುಂದುವರಿಯಲು ಅವಕಾಶ ನೀಡಿದೆ. ಸಿಬಿಐ ಪರವಾಗಿ ಹಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಹಾಜರಾದರು. ಸೂಪರ್‌ಟೆಕ್‌ ಲಿಮಿಟೆಡ್‌ ಹೊರತುಪಡಿಸಿ ಉಳಿದ ಬಿಲ್ಡರ್‌ಗಳ ವಿರುದ್ಧದ ಪ್ರಾಥಮಿಕ ತನಿಖೆ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.   

ADVERTISEMENT

ಮುಚ್ಚಿದ ಲಕೋಟೆಯಲ್ಲಿ ಸಿಬಿಐ ವರದಿಯ ಕೆಲವು ಭಾಗಗಳನ್ನು ಅಮಿಕಸ್‌ ಕ್ಯೂರಿ, ವಕೀಲ ರಾಜೀವ್‌ ಜೈನ್‌ ಅವರಿಗೆ ನೀಡುವಂತೆ ಪೀಠವು,  ಹಚ್ಚುವರಿ ಸಾಲಿಸಿಟರ್‌ ಜನರಲ್‌ ಅವರಿಗೆ ಸೂಚಿಸಿತು. 

ವಂಚನೆ ಹೇಗೆ?:

ಮನೆ ಖರೀದಿದಾರರ ಹೆಸರಿನಲ್ಲಿ ಮಂಜೂರಾದ ಸಾಲದ ಮೊತ್ತವನ್ನು ಬ್ಯಾಂಕ್‌ಗಳು ನೇರವಾಗಿ ಬಿಲ್ಡರ್‌ಗಳ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸುತ್ತಿದ್ದವು. ಬಿಲ್ಡರ್‌ಗಳಿಂದ ಫ್ಲ್ಯಾಟ್‌ಗಳು ಹಸ್ತಾಂತರವಾಗುವ ಮುನ್ನವೇ, ಈ ಸಾಲದ ಮೇಲಿನ ಕಂತು ಪಾವತಿಸುವಂತೆ ಬ್ಯಾಂಕ್‌ಗಳು ಮನೆ ಖರೀದಿದಾರರಿಗೆ ಸೂಚಿಸುತ್ತಿದ್ದವು.

‘ಸೂಪರ್‌ಟೆಕ್‌ ಲಿಮಿಟೆಡ್‌ ವಿರುದ್ಧ 799 ಮನೆ ಖರೀದಿದಾರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಅಮಿಕಸ್‌ ಕ್ಯೂರಿಯು ಸೂಪರ್‌ಟೆಕ್‌ ಲಿಮಿಟೆಡ್‌ ಅನ್ನು ಈ ವಂಚನೆ ಪ್ರಕರಣಗಳ ಮುಖ್ಯ ಅಪರಾಧಿ ಎಂದು ಹೇಳಿದ್ದಾರೆ. ಕಾರ್ಪೊರೇಷನ್‌ ಬ್ಯಾಂಕ್‌ ಸಬ್ಸಿಡಿ ಯೋಜನೆಗಳ ಮೂಲಕ ವಿವಿಧ ಬಿಲ್ಡರ್‌ಗಳಿಗೆ ₹2,700 ಕೋಟಿಯಷ್ಟು ಸಾಲ ವಿತರಿಸಿದೆ. ಅಮಿಕಸ್‌ ಕ್ಯೂರಿ ವರದಿ ಪ್ರಕಾರ, 1998ರಿಂದ ಸೂಪರ್‌ಟೆಕ್‌ ಲಿಮಿಟೆಡ್‌ ಮಾತ್ರ ₹5,157.86 ಕೋಟಿಯಷ್ಟು ಸಾಲ ಪಡೆದುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.