ADVERTISEMENT

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ : ಮಂಗಳವಾರ ವಿಚಾರಣೆ 

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 5:56 IST
Last Updated 4 ಫೆಬ್ರುವರಿ 2019, 5:56 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ಕೋಲ್ಕತ್ತ:ಶಾರದಾ ಚಿಟ್ ಫಂಡ್ ಪ್ರಕರಣದ ತನಿಖೆಗೆ ಕೋಲ್ಕತ್ತ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಜತೆ ಸಹಕರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಭಾನುವಾರ ರಾಜೀವ್ ಕುಮಾರ್ ವಿಚಾರಣೆಗಾಗಿ ಅವರ ನಿವಾಸಕ್ಕೆ ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ವಶಕ್ಕೆ ಪಡೆದ ನಾಟಕೀಯ ಘಟನೆ ನಡೆದಿತ್ತು.

ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದ ಕಡತ ಮತ್ತು ದಾಖಲೆ ಕಣ್ಮರೆಯಾದ ಬಗ್ಗೆ ಪ್ರಶ್ನಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್‌ ಸ್ಟ್ರೀಟ್‌ನಲ್ಲಿರುವ ಪೊಲೀಸ್‌ ಕಮಿಷನರ್‌ ನಿವಾಸಕ್ಕೆ ತೆರಳಿತ್ತು. ನಿವಾಸದ ಮುಂದೆ ಸಿಬಿಐ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ವಾಗ್ವಾದಗಳು ನಡೆದಿತ್ತು. ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ADVERTISEMENT

ಸಿಬಿಐ ನಡೆ ಖಂಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ತಡರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು.

ಪೊಲೀಸರ ಕ್ರಮ ಪ್ರಶ್ನಿಸಿ ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.

ಕೋಲ್ಕತ್ತ ಪೊಲೀಸ್ ಆಯುಕ್ತರು ಸಾಕ್ಷ್ಯಗಳನ್ನು ಕಡತಗಳನ್ನು ನಾಶ ಮಾಡಲು ಯತ್ನಿಸಿದರೆ, ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

ನಮ್ಮ ತಂಡವನ್ನು ವಶ ಪಡಿಸಿ ಬಂಧನದಲ್ಲಿಡಲಾಯಿತು. ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತಕ್ಷಣವೇ ಶರಣಾಗಬೇಕು ಎಂದು ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್ ‍ಗೆ ಅರ್ಜಿ ಸಲ್ಲಿಸಿದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ರಾಜೀವ್ ಕುಮಾರ್ ಅವರಿಗೆ ಹಲವಾರು ಬಾರಿ ಸಮನ್ಸ್ ನೀಡಿದರೂ ತನಿಖೆಗೆ ಸಹಕರಿಸಲು ಅವರು ಮುಂದಾಗಲಿಲ್ಲ ಎಂದು ಸಿಬಿಐ ಅರ್ಜಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.