ADVERTISEMENT

ಜೈದೀಪ್ ಸೆಂಗರ್ ಅರ್ಜಿಗೆ ಸಿಬಿಐ ವಿರೋಧ

ಪಿಟಿಐ
Published 17 ಫೆಬ್ರುವರಿ 2026, 16:24 IST
Last Updated 17 ಫೆಬ್ರುವರಿ 2026, 16:24 IST
.
.   

ನವದೆಹಲಿ: ಮಧ್ಯಂತರ ಜಾಮೀನಿನ ಅವಧಿ ವಿಸ್ತರಿಸುವಂತೆ ಜೈದೀಪ್ ಸೆಂಗರ್ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗೆ ಸಿಬಿಐ ಮಂಗಳವಾರ ವಿರೋಧ ವ್ಯಕ್ತಪಡಿಸಿದೆ.

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಸಹೋದರ ಜೈದೀಪ್ ಸೆಂಗರ್‌ಗೆ ನ್ಯಾಯಾಲಯವು 10 ವರ್ಷ ಶಿಕ್ಷೆ ವಿಧಿಸಿದೆ.

ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿರುವುದರಿಂದ ಮಧ್ಯಂತರ ಜಾಮೀನಿನ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಕೋರಿ ಜೈದೀಪ್ ಸೆಂಗರ್ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಮಧ್ಯಂತರ ಜಾಮೀನಿನ ಅವಧಿ ವಿಸ್ತರಣೆಗೆ ಇದು ಸೂಕ್ತವಾದ ಪ್ರಕರಣವಲ್ಲ. ಅರ್ಜಿಗೆ ಪೂರಕವಾಗಿ ಸಲ್ಲಿಸಿರುವ ವೈದ್ಯಕೀಯ ಶಿಫಾರಸು ಪತ್ರ ನಿಜವಲ್ಲ. ಕಟ್ಟುಕತೆ. ಜಾಮೀನು ಅವಧಿಯ ವಿಸ್ತರಣೆ ಬೇಕಿದ್ದರೆ, ಅವರು ‘ಸಮಯದೊಳಗೆ’ ನ್ಯಾಯಾಲಯದ ಮುಂದೆ ಬರಬೇಕಾಗಿತ್ತು’ ಎಂದು ಸಿಬಿಐ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಆದಾಗ್ಯೂ, ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಜೈದೀಪ್ ಸೆಂಗರ್‌ನ ಮಧ್ಯಂತರ ಜಾಮೀನು ಅವಧಿಯನ್ನು ಫೆ. 20ರವರೆಗೆ ವಿಸ್ತರಿಸಿದರು.

ಸೆಂಗರ್‌ನ ಆರೋಗ್ಯದ ಕುರಿತಂತೆ ವಿವರವಾದ ಪರಿಶೀಲನಾ ವರದಿ ಸಲ್ಲಿಸುವಂತೆ ಶರ್ಮಾ ಅವರು ಸಿಬಿಐ ವಕೀಲರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.