
ಕೊಚ್ಚಿ: ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆಯಾದ ಪ್ರಕರಣದ ತನಿಖೆಯನ್ನು ಕೇಂದ್ರಿಯ ತನಿಖಾ ಸಂಸ್ಥೆಯಿಂದ (ಸಿಬಿಐ) ನಡೆಸಬೇಕು ಎಂದು ಕೋರಿ ಕೇರಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ನಾಪತ್ತೆ ಪ್ರಕರಣದ ಕೂಲಂಕುಷ ತನಿಖೆ ನಡೆಸುವ ಅಗತ್ಯವಿದೆ. ದೇವಾಲಯಕ್ಕೆ ಸೇರಿದ ಚಿನ್ನವನ್ನು ವಿವಿಧ ರಾಜ್ಯಗಳಿಗೆ ಹಂಚಲಾಗಿದ್ದು, ಕೇರಳದ ಹೊರಗಿನ ವ್ಯಕ್ತಿಗಳು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸಿಬಿಐನಿಂದ ಮಾತ್ರ ಸಮಗ್ರ ತನಿಖೆ ನಡೆಸಲು ಸಾಧ್ಯ’ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
‘ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಸೇರಿದಂತೆ ಹಲವರು ಆಡಳಿತಾರೂಢ ಸಿಪಿಎಂ ಪಕ್ಷದ ಜೊತೆಗೆ ನಂಟು ಹೊಂದಿದ್ದಾರೆ. ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ)ಯು ಪರಿಣಾಮಕಾರಿಯಾಗಿ ತನಿಖೆ ನಡೆಸುವ ಬಗ್ಗೆ ಅನುಮಾನವಿದೆ. ಅಲ್ಲದೇ, ರಾಜ್ಯದ ಗಡಿಯಾಚೆಗೂ ಈ ಅಪರಾಧ ವಿಸ್ತರಿಸಿದೆ’ ಎಂದು ತಿಳಿಸಿದ್ದಾರೆ.
‘ಟಿಡಿಬಿಯ ಮಾಜಿ ಸದಸ್ಯರ ಮಗ, ಐಪಿಎಸ್ ಅಧಿಕಾರಿಯೊಬ್ಬರು ಪ್ರಕರಣದ ತನಿಖೆ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವುದು ಗಂಭೀರ ವಿಚಾರವಾಗಿದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐನಿಂದಲೇ ನಡೆಸಬೇಕು’ ಎಂದು ರಾಜೀವ್ ಚಂದ್ರಶೇಖರ್ ನ್ಯಾಯಪೀಠದ ಗಮನಸೆಳೆದರು.
ಟಿಡಿಬಿಗೆ ಸೇರಿದ ಆಸ್ತಿಗಳನ್ನು ಆಡಿಟ್ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಅರ್ಜಿ ಪರಿಗಣಿಸಿದ ರಾಜಾ ವಿಜಯರಾಘವನ್, ಕೆ.ವಿ.ಜಯಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮುಂದಿನ ವಾರ ಅರ್ಜಿಯನ್ನು ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಇಂದು ನಿರ್ಧಾರ: ಪ್ರಕರಣದಲ್ಲಿ ಬಂಧಿತರಾಗಿರುವ ಪದ್ಮಕುಮಾರ್ ಕೊಲ್ಲಂನ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ. ಪ್ರಕರಣದ ತನಿಖೆಯ ಪ್ರಗತಿಯ ಕುರಿತು ಹೈಕೋರ್ಟ್ ಬುಧವಾರ ಪರಾಮರ್ಶೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.