ADVERTISEMENT

ಅಕ್ರಮ ಗಣಿಗಾರಿಕೆ: 4 ರಾಜ್ಯಗಳ 45 ಕಡೆ ಸಿಬಿಐ ಶೋಧ

ಪಿಟಿಐ
Published 28 ನವೆಂಬರ್ 2020, 14:05 IST
Last Updated 28 ನವೆಂಬರ್ 2020, 14:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಕ್ರಮ ಗಣಿಗಾರಿಕೆ ಹಾಗೂ ಕಲ್ಲಿದ್ದಲು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳ 45 ಕಡೆ ಸಿಬಿಐ ಅಧಿಕಾರಿಗಳು ಶನಿವಾರ ಶೋಧ ನಡೆಸಿದ್ದಾರೆ.

ಪ್ರಕರಣದಲ್ಲಿ ಅನೂಪ್‌ ಮಾನ್ಜಿ ಎಂಬುವವರು ಈಸ್ಟರ್ನ್‌ ಕೋಲ್‌ಫೀಲ್ಡ್ಸ್‌ ಲಿ.ನ(ಇಸಿಎಲ್‌) ಇಬ್ಬರು ವ್ಯವಸ್ಥಾಪಕರು ಹಾಗೂ ಮೂವರು ಭದ್ರತಾ ಅಧಿಕಾರಿಗಳ ಜೊತೆಗೂಡಿ ಕಲ್ಲಿದ್ದಲು ಕಳವು ಮಾಡಿರುವ ಆರೋಪವಿದೆ. ಮಾನ್ಜಿ ಹಾಗೂ ಇಸಿಎಲ್‌ ವ್ಯವಸ್ಥಾಪಕರಾದ ಅಮಿತ್‌ ಕುಮಾರ್‌ ಧರ್‌ ಹಾಗೂ ಜಯೇಶ್‌ ಚಂದ್ರ ರೈ ಹಾಗೂ ಇಸಿಎಲ್‌ ಮುಖ್ಯ ಭದ್ರತಾ ಅಧಿಕಾರಿ ತನ್ಮಯ್‌ ದಾಸ್‌, ಕುನುಸ್ತೋರಿಯಾ ವಲಯ ಭದ್ರತಾ ಇನ್‌ಸ್ಪೆಕ್ಟರ್‌ ಧನಂಜಯ್‌ ರೈ ಹಾಗೂ ಕಾಜೋರ್‌ ಪ್ರದೇಶದ ಭದ್ರತಾ ಅಧಿಕಾರಿ ದೇಬಾಶಿಶ್‌ ಮುಖರ್ಜಿ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿತ್ತು.

ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆರೋಪಿ ಅನೂಪ್‌ ಮಾನ್ಜಿ, ಅಕ್ರಮ ಗಣಿಗಾರಿಕೆ ಜೊತೆಗೆ ಇಸಿಎಲ್‌ನ ಕುನುಸ್ತೋರಿಯಾ ಹಾಗೂ ಕಾಜೋರ್‌ ಪ್ರದೇಶದಲ್ಲಿರುವ ಗಣಿಯಿಂದ ಕಲ್ಲಿದ್ದಲನ್ನು ಕಳವು ಮಾಡುತ್ತಿದ್ದರು ಎನ್ನುವ ಆರೋಪವಿದೆ. ಇಸಿಎಲ್‌ನ ವಿಚಕ್ಷಣಾ ದಳ ಹಾಗೂ ಅದರ ಕಾರ್ಯಪಡೆಯು ಮೇ 2020ರಿಂದ ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಪತ್ತೆಹಚ್ಚಿತ್ತು. ತನಿಖೆ ಸಂದರ್ಭದಲ್ಲಿ ಅಕ್ರಮವಾಗಿ ಲಾರಿಗಳ ತೂಕವನ್ನು ಅಳೆಯುವ ಕೇಂದ್ರಗಳನ್ನು(ವೇಬ್ರಿಜ್‌) ತಂಡವು ಪತ್ತೆಹಚ್ಚಿತ್ತು. ಇಸಿಎಲ್‌ ಪ್ರದೇಶದಿಂದ ಯೋಜನಾಬದ್ಧವಾಗಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ಮಾಡಿ ಸಾಗಿಸುತ್ತಿರುವುದು ಈ ವೇಳೆ ಪತ್ತೆಯಾಗಿತ್ತು.

ADVERTISEMENT

2020 ಆ.7ರಂದು ನಡೆಸಿದ ದಾಳಿಯಲ್ಲಿ ಪಾಂಡವೇಶ್ವರ್ ಪ್ರದೇಶದಲ್ಲಿ 9 ಮೆಟ್ರಿಕ್‌ ಟನ್‌ ಕದ್ದ ಕಲ್ಲಿದ್ದಲು ಪತ್ತೆಯಾಗಿತ್ತು. ಕಳವು ಮಾಡಲಾಗಿದ್ದ ಕಲ್ಲಿದ್ದಲು, ಇದೇ ರೀತಿ ಹಲವೆಡೆ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ರೈಲ್ವೆ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯನ್ನು ಸಿಬಿಐ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲಿದ್ದಲು ಕಳವಿಗೆ ಅನೂಪ್‌ ಮಾನ್ಜಿಯೇ ಕಿಂಗ್‌ಪಿನ್‌(ಪ್ರಮುಖ ಆರೋಪಿ)ಆಗಿದ್ದ ಎಂದು ಸಿಬಿಐ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.