ADVERTISEMENT

ಕಲ್ಲಿದ್ದಲು ಕಳ್ಳತನ ಪ್ರಕರಣ: ಮಮತಾ ಸೋದರಳಿಯ ನಿವಾಸದಲ್ಲಿ ಸಿಬಿಐ ಶೋಧ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 19:08 IST
Last Updated 21 ಫೆಬ್ರುವರಿ 2021, 19:08 IST
ಸಿಬಿಐ ಅಧಿಕಾರಿಗಳು ಭೇಟಿ ನೀಡಿದ ನಂತರ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಎದುರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ   -ಪಿಟಿಐ ಚಿತ್ರ
ಸಿಬಿಐ ಅಧಿಕಾರಿಗಳು ಭೇಟಿ ನೀಡಿದ ನಂತರ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಎದುರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ   -ಪಿಟಿಐ ಚಿತ್ರ   

ನವದೆಹಲಿ/ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತ ನಿವಾಸದಲ್ಲಿ ಸಿಬಿಐ ಅಧಿಕಾರಿಗಳುಭಾನುವಾರ ಶೋಧ ಕಾರ್ಯ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಬಿಹಾರದ ಕಲ್ಲಿದ್ದಲು ಗಣಿಯಲ್ಲಿ ಅದಿರು ಕಳ್ಳತನ ಪ್ರಕರಣದ ತನಿಖೆಗೆ ಸಂಬಂಧಿಸಿ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ಸಿಬಿಐ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಇನ್ನೇನು ವಿಧಾನಸಭಾ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಈ ಬೆಳವಣಿಗೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಆಡಳಿತಾರೂಢ ಟಿಎಂಸಿ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಟೀಕಿಸಿದೆ. ಈ ಪ್ರಕರಣ ಬಹಳ ಹಿಂದೆಯೇ ದಾಖಲಾಗಿದೆ. ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಶೋಧಕಾರ್ಯ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ADVERTISEMENT

ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಕಳ್ಳತನ ಪ್ರಕರಣದ ಸಂಖ್ಯೆಯನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಉಲ್ಲೇಖಿಸಲಾದ ಪ್ರಕರಣಕ್ಕೂ ನಿಮಗೂ ಸಂಬಂಧವಿದೆ ಎಂದು ಕೆಲವು ಸಾಂದರ್ಭಿಕ ಸಾಕ್ಷ್ಯಗಳು ಹೇಳುತ್ತಿವೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಸಂಬಂಧ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಫೆಬ್ರುವರಿ 21ನೇ ರಂದು ಮಧ್ಯಾಹ್ನ ಮೂರು ಗಂಟೆಗೆ ನಿಮ್ಮ ಮನೆಗೆ ಬರುತ್ತೇವೆ. ಆಗ ನೀವು ಇರಬೇಕು’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ರುಜಿರಾ ಅವರ ಸೋದರಿ ಮೇನಕಾ ಗಂಭೀರ್ ಅವರಿಗೂ ವಿಚಾರಣೆ ವೇಳೆ ಹಾಜರಿರುವಂತೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕುನುಸ್ತೋರಿಯಾ ಮತ್ತು ಕಜೋರಾ ಪ್ರದೇಶದಲ್ಲಿನ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲನ್ನು ಕಳ್ಳಸಾಗಣೆ ಮಾಡಲಾಗಿದೆ. ಜತೆಗೆ ಧನಬಾದ್ ಪ್ರದೇಶದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಕಲ್ಲಿದ್ದಲನ್ನು ಕಳ್ಳತನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿಯೇ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಅದಿರು ಕಳ್ಳಸಾಗಣೆ ಪ್ರಕರಣದ ಮುಖ್ಯ ಆರೋಪಿ ಮಾಂಝಿ ಅಲಿಯಾಸ್ ಲಾಲಾ, ಈಸ್ಟರ್ನ್ ಕೋಲ್‌ಫೀಲ್ಡ್‌ ಲಿಮಿಟೆಡ್‌ನ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸಲಾಗಿದೆ.

ಧನಬಾದ್‌ನಲ್ಲಿ ಕಲ್ಲಿದ್ದಲು ಕಳ್ಳತನದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ಭಾಗಿಯಾಗಿರಬಹುದು ಎಂಬ ಅನುಮಾನದ ಮೇಲೆ ಈ ಶೋಧಕಾರ್ಯ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯ ಲಭ್ಯವಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಅಭಿಷೇಕ್ ಬ್ಯಾನರ್ಜಿ ಮನೆಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿರುವುದು ರಾಜಕೀಯ ದ್ವೇಷದ ನಡೆ. ಅಭಿಷೇಕ್ ಬ್ಯಾನರ್ಜಿ ಅವರನ್ನು ಈಚಿನ ದಿನಗಳಲ್ಲಿ ಬಿಜೆಪಿ ಗುರಿ ಮಾಡುತ್ತಿರುವ ರೀತಿ ನೋಡಿದರೆ, ಏನೋ ಆಗುತ್ತದೆ ಎನಿಸುತ್ತಿದೆ ಎಂದು ಟಿಎಂಸಿ ಮುಖಂಡ ಸೌಗತಾ ರಾಯ್ ಹೇಳಿದ್ದಾರೆ.

***

ನೆಲದ ಕಾನೂನಿನಲ್ಲಿ ನಮಗೆ ನಂಬಿಕೆಯಿದೆ. ನಮ್ಮನ್ನು ಈ ರೀತಿ ಹೆದರಿಸಬಹುದು ಎಂದು ಅವರು ಅಂದುಕೊಂಡಿರಬಹುದು. ನಾವು ಅವರ ಎದುರು ತಲೆಬಾಗುವವರಲ್ಲ

-ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಸಂಸದ

***

ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕಾನೂನು ನೋಡಿಕೊಳ್ಳುತ್ತದೆ. ತಪ್ಪು ಮಾಡಿಲ್ಲವಾದರೆ, ಕಾನೂನಾತ್ಮಕ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವ ಅವಶ್ಯಕತೆ ಇರುವುದಿಲ್ಲ

-ಕೈಲಾಶ್ ವಿಜಯವರ್ಗೀಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.