ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ಈ ವರ್ಷವೂ ದೆಹಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಂತ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿವೆ.
ದೆಹಲಿ ಸರ್ಕಾರಿ ಶಾಲೆಗಳು ಸತತ ಐದನೇ ವರ್ಷ ಖಾಸಗಿ ಶಾಲೆಗಳನ್ನು ಹಿಂದಿಕ್ಕಿ ಅಚ್ಚರಿಯ ಫಲಿತಾಂಶ ನೀಡಿವೆ.
ಸಿಬಿಎಸ್‌ಇ 12ನೇ ತರಗತಿಯಲ್ಲಿ ದೇಶದಾದ್ಯಂತ ಶೇ 88.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತೇರ್ಗಡೆ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 5.38ರಷ್ಟು ಏರಿಕೆಯಾಗಿದೆ.
ದೆಹಲಿ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷ ಶೇ 94.24ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ವರ್ಷ ಶೇ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ದೆಹಲಿಯ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಶೇ 5.9 ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ಈ ವರ್ಷ ದೆಹಲಿ ಸರ್ಕಾರಿ ಶಾಲೆಗಳ ಸಿಬಿಎಸ್‌ಇ 12 ನೇ ತರಗತಿಯ ಫಲಿತಾಂಶವು ಶೇ 98 ಎಂದು ಘೋಷಿಸಲು ಹೆಮ್ಮೆಪಡುತ್ತಿದ್ದೇನೆ. ಇದು ಐತಿಹಾಸಿಕವಾಗಿದೆ. ನಮ್ಮ ಶಿಕ್ಷಣ ತಂಡ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಅಧಿಕಾರಿಗಳಿಗೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೂ ಆಗಿರುವ ಮನೀಶ್ ಸಿಸೋಡಿಯಾ, 'ಕಳೆದ 5 ವರ್ಷಗಳಲ್ಲಿ, ನಾವು ನಮ್ಮದೇ ಆದ ದಾಖಲೆಯನ್ನು ಮುರಿಯಲು ನಮ್ಮೊಂದಿಗೆ ಸ್ಪರ್ಧಿಸುತ್ತಿದ್ದೇವೆ. ಈ ವರ್ಷವೂ ಇದಕ್ಕೆ ಹೊರತಾಗಿಲ್ಲ!
2020: ಶೇ 98
2019: ಶೇ 94.24
2018: ಶೇ 90.6
2017: ಶೇ 88.2
2016: ಶೇ 85.9
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ತಂಡಕ್ಕೆ ಅಭಿನಂದನೆಗಳು!' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.