ADVERTISEMENT

ಭಯೋತ್ಪಾದನೆ ಜೊತೆಗೆ ಚೀನಾ ಜತೆಗಿನ ಗಡಿ ವ್ಯಾಜ್ಯವೂ ದೊಡ್ಡ ಸವಾಲು: ಸಿಡಿಸಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 15:55 IST
Last Updated 5 ಸೆಪ್ಟೆಂಬರ್ 2025, 15:55 IST
ಅನಿಲ್‌ ಚೌಹಾಣ್‌
ಅನಿಲ್‌ ಚೌಹಾಣ್‌   

ಲಖನೌ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಜೊತೆಜೊತೆಗೆ ಚೀನಾದೊಂದಿಗಿನ ಗಡಿ ವ್ಯಾಜ್ಯ ಸಹ ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿದೆ ಎಂದು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಅನಿಲ್‌ ಚೌಹಾಣ್‌ ಅವರು ಶುಕ್ರವಾರ ಹೇಳಿದರು.

ಗೋರಖಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯುದ್ಧದ ನಿಯಮಗಳು ಬದಲಾಗಿವೆ. ಸೈಬರ್‌ ಮತ್ತು ಬಾಹ್ಯಾಕಾಶ ಯುದ್ಧಗಳೂ ಸೇರ್ಪಡೆಯಾಗಿವೆ’ ಎಂದರು.

ಬಾಲಾಕೋಟ್‌ ದಾಳಿ ನಂತರ ಭಾರತ, ಪಾಕಿಸ್ತಾನ ಎರಡೂ ವಿಭಿನ್ನ ರೀತಿಯಲ್ಲಿ ಪಾಠ ಕಲಿತಿವೆ. ದೂರಗಾಮಿ ಶಸ್ತ್ರಾಸ್ತ್ರಗಳತ್ತ ಭಾರತ ಗಮನಹರಿಸಿದರೆ; ಪಾಕಿಸ್ತಾನವು ವಾಯುರಕ್ಷಣಾ ವ್ಯವಸ್ಥೆ ಬಲಪಡಿಸುವುದರತ್ತ ಚಿತ್ತ ಹರಿಸಿದೆ ಎಂದು ತಿಳಿಸಿದರು.

ADVERTISEMENT

ಆಪರೇಷನ್‌ ಸಿಂಧೂರದ ಸಂದರ್ಭದಲ್ಲಿ ‘ಯೋಜಿತ ದಾಳಿ’, ‘ಗುರಿಯ ಆಯ್ಕೆ’ ಸೇರಿದಂತೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಸೇನೆಗೆ ನೀಡಲಾಗಿತ್ತು ಎಂದು ಹೇಳಿದರು.

‘ಮೊದಲಿಗೆ ಪಾಕಿಸ್ತಾನದ ಉಗ್ರರ ಅಡುಗುದಾಣಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಲಾಯಿತು. ಆದರೆ ನಂತರ ರಾಜಕೀಯ ನಾಯಕರೊಂದಿಗಿನ ಚರ್ಚೆ ಬಳಿಕ ಬಹಾವಲಪುರ ಮತ್ತು ಮುರೀದಕೆ ಮೇಲಿನ ದಾಳಿ ಸಹ ಅಗತ್ಯ ಎಂಬ ಅರಿವಾಯಿತು’ ಎಂದರು.

ಜರ್ಮನಿಯ ರಾಜಕೀಯ ವಿಶ್ಲೇಷಕರೊಬ್ಬರ ‘ಯುದ್ಧವು ರಾಜಕೀಯದ ವಿಸ್ತೃತ ರೂಪ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ, ‘ಯುದ್ಧ ಮತ್ತು ಭೌಗೋಳಿಕ ರಾಜಕೀಯವನ್ನು ಪತ್ಯೇಕವಾಗಿ ನೋಡಬಾರದು’ ಎಂದು ಅವರು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕತ್ವದ ಸೂಚನೆಯಂತೆ ಸೇನೆಯು ಕಾರ್ಯನಿರ್ವಹಿಸುತ್ತದೆ. ಸರ್ಕಾರಕ್ಕೆ ಹೆಚ್ಚೆ ಹೆಚ್ಚು ಆಯ್ಕೆಗಳನ್ನು ನೀಡುವುದು ಸೇನೆಯ ಹೊಣೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.