ನವದೆಹಲಿ: ಪ್ಯಾರಾಸಿಟಮೋಲ್, ಪ್ಯಾನ್ ಡಿ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಮಾತ್ರೆಗಳು ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳ ಮಾದರಿಗಳ ಪಟ್ಟಿ ಸಿದ್ಧಪಡಿಸಿರುವ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ), ಈ ಮಾದರಿಗಳು ‘ಪ್ರಮಾಣಿತ ಗುಣಮಟ್ಟ’ ಹೊಂದಿಲ್ಲ ಎಂದು ಹೇಳಿದೆ.
ಔಷಧಗಳ ಕುರಿತು ಆಗಸ್ಟ್ ತಿಂಗಳಿಗೆ ಸಂಬಂಧಿಸಿದ ವರದಿಯನ್ನು ಸಿಡಿಎಸ್‌ಸಿಒ ಬಿಡುಗಡೆ ಮಾಡಿದ್ದು, ಈ ಔಷಧಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಿದೆ. ಔಷಧಗಳ ಗುಣಮಟ್ಟಕ್ಕೆ ಸಂಬಂಧಿಸಿ ಸಿಡಿಎಸ್‌ಸಿಒ, ಪ್ರತಿ ತಿಂಗಳು ವರದಿ ಬಿಡುಗಡೆ ಮಾಡುತ್ತದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳ ಮಾದರಿಗಳು ಕೂಡ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ. ಅಲ್ಕೆಮ್ ಲ್ಯಾಬರೋಟರೀಸ್, ಹಿಂದೂಸ್ತಾನ ಆ್ಯಂಟಿಬಯೋಟಿಕ್ಸ್ ಲಿಮಿಟೆಡ್, ಹೆಟರೊ ಲ್ಯಾಬ್ಸ್ ಲಿಮಿಟೆಡ್, ಕರ್ನಾಟಕ ಆ್ಯಂಟಿಬಯೋಟಿಕ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್, ನೆಸ್ಟರ್ ಫಾರ್ಮಾಸ್ಯೂಟಿಕಲ್ಸ್ ಲಿ., ಪ್ರಿಯಾ ಫಾರ್ಮಾಸ್ಯೂಟಿಕಲ್ಸ್ ಹಾಗೂ ಸ್ಕಾಟ್–ಎಡಿಲ್ ಫಾರ್ಮಾಸಿಯಾ ಲಿಮಿಟೆಡ್ ಕಂಪನಿಗಳು ಉತ್ಪಾದಿಸುವ ಔಷಧಗಳ ಕುರಿತು ಈ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಅಧಿಕ ರಕ್ತದೊತ್ತಡ ಚಿಕಿತ್ಸೆಗೆ ಬಳಸುವ ಟೆಲ್ಮಿಸರ್ಟಾನ್ ಮತ್ತು ಅಟ್ರೊಪೈನ್ ಸಲ್ಫೇಟ್ ಆ್ಯಂಟಿಬಯೋಟಿಕ್ ಮಾತ್ರೆಗಳಾದ ಅಮಾಕ್ಸಿಲಿನ್ ಮತ್ತು ಪೊಟ್ಯಾಶಿಯಂ ಕ್ಲಾವುಲನೇಟ್ ಮಾತ್ರೆಗಳು ‘ಪ್ರಮಾಣಿತ ಗುಣಮಟ್ಟ’ ಹೊಂದಿಲ್ಲ
ಶೆಲ್‌ಕಾಲ್ ವಿಟಮಿನ್ ಸಿ ಸಾಫ್ಟ್‌ಜೆಲ್‌ನೊಂದಿಗಿನ ವಿಟಮಿನ್ ಬಿ ಕಾಂಪ್ಲೆಕ್ಸ್ ವಿಟಮಿನ್ ಸಿ ಮತ್ತು ಡಿ3 ಸಿಪ್ರೊಫ್ಲಾಕ್ಸಾಸಿನ್ ಮಾತ್ರೆಗಳ ಮಾದರಿಗಳು ಸಹ ‘ಪ್ರಮಾಣಿತ ಗುಣಮಟ್ಟ’ ಹೊಂದಿಲ್ಲ
ಆಂಧ್ರಪ್ರದೇಶ ಅರುಣಾಚಲ ಪ್ರದೇಶ ಅಸ್ಸಾಂ ಬಿಹಾರ ಛತ್ತೀಸಗಢ ಗೋವಾ ಗುಜರಾತ್ ತಮಿಳುನಾಡು ಸೇರಿದಂತೆ 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ‘ಪ್ರಮಾಣಿತ ಗುಣಮಟ್ಟ’ ಹೊಂದಿರದ ಔಷಧಗಳ ಕುರಿತು ಯಾವುದೇ ಮಾಹಿತಿ ಸಲ್ಲಿಸಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.