ನವದೆಹಲಿಯ ಇಂದಿರಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು
ಪಿಟಿಐ ಚಿತ್ರ
ನವದೆಹಲಿ: ‘ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ದೇಶದಲ್ಲಿ ಹೇಗೆ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂಬುದನ್ನು ಅರಿಯಲು ಇಂದಿನ ಯುವಸಮುದಾಯಕ್ಕೆ ಇದೊಂದು ಮಹತ್ವದ ಉದಾಹರಣೆಯಾಗಿದೆ. ನಾನು ಈ ಹಿಂದೆ ಭರವಸೆ ನೀಡಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಕರ್ನಾಟಕದ ಅಳಂದದಲ್ಲಿ 2023ರ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಅಳಿಸಿಹಾಕುವ ಯತ್ನ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿತ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಈ ಎಲ್ಲಾ ಕೃತ್ಯಗಳಿಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಾನು ಗಂಭೀರ ಆರೋಪ ಮಾಡುತ್ತಿದ್ದೇನೆ. ಇದನ್ನು ಹಗುರವಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗವು ಮತಗಳ್ಳರನ್ನು ರಕ್ಷಿಸುತ್ತಿದೆ. ಈ ಕಳ್ಳರೇ ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.
‘ಭಾರತದಲ್ಲಿ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕನಾಗಿರುವ ನಾನು ಶೇ 100ರಷ್ಟು ಪುರಾವೆಗಳಿಲ್ಲದೆ ಏನನ್ನೂ ಹೇಳುವುದಿಲ್ಲ. ಅಳಂದದಲ್ಲಿ 6,018 ಮತಗಳನ್ನು ಅಳಿಸಿಹಾಕಲು ಯಾರೋ ಪ್ರಯತ್ನಿಸಿದ್ದರು. ಆದರೆ ಕಾಕತಾಳೀಯ ಎಂಬಂತೆ ಸಿಕ್ಕಿಬಿದ್ದರು. ತಮ್ಮ ಚಿಕ್ಕಪ್ಪನ ಹೆಸರೇ ಪಟ್ಟಿಯಲ್ಲಿ ಇಲ್ಲದಿರುವುದನ್ನು ಬೂತ್ ಮಟ್ಟದ ಅಧಿಕಾರಿ ಗಮನಿಸಿದ್ದಾರೆ. ಆದರೆ ಇದರ ಹಿಂದೆ ಬೇರೆ ಯಾವುದೋ ‘ಶಕ್ತಿ’ ಇದೆ’ ಎಂದಿದ್ದಾರೆ.
‘ಮತದಾರರಂತೆ ನಟಿಸಿ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕಕ್ಕೆ ಸೇರದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈ ಅರ್ಜಿಗಳು ಸ್ವಯಂಚಾಲಿತ ತಂತ್ರಾಂಶದ ಮೂಲಕ ದಾಖಲಿಸಿಕೊಳ್ಳಲಾಗಿದೆ’ ಎಂದ ರಾಹುಲ್ ಗಾಂಧಿ, ಮತಪಟ್ಟಿಯಿಂದ ಹೆಸರು ಕೈಬಿಟ್ಟವರನ್ನು ವೇದಿಕೆಗೆ ಕರೆದರು.
‘ಕಳೆದ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಸಿಐಡಿಯು 18 ಪತ್ರಗಳನ್ನು ಕಳುಹಿಸಿದೆ. ಯಾವ ಪ್ರದೇಶದಿಂದ ಈ ಮತದಾರರ ಹೆಸರು ನೋಂದಣಿಯಾಗಿದೆ ಎಂಬುದಕ್ಕೆ ಪೂರಕವಾದ ಐಪಿ ವಿಳಾಸ ಹಾಗೂ ಅದಕ್ಕೆ ಬಳಸಿದ ಒಟಿಪಿ ಮಾಹಿತಿ ನೀಡುವಂತೆ ಸಿಐಡಿ ಆಯೋಗವನ್ನು ಕೇಳಿದೆ. ಆದರೆ ಆಯೋಗವು ಅದನ್ನು ಏಕೆ ನೀಡುತ್ತಿಲ್ಲ. ಏಕೆಂದರೆ ಒಂದೊಮ್ಮೆ ಆಯೋಗ ಅದನ್ನು ನೀಡಿದರೆ, ಈ ಕೃತ್ಯದ ಹಿಂದಿರುವ ವ್ಯಕ್ತಿಯ ಮನೆಬಾಗಿಲಿಗೆ ಪೊಲೀಸರನ್ನು ಕರೆದೊಯ್ದು ನಿಲ್ಲಿಸುತ್ತದೆ ಎಂಬುದು ಅವರಿಗೂ ಗೊತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸುವುದು ಹಾಗೂ ಸೇರಿಸುವುದನ್ನು ಯಾರು ಮಾಡುತ್ತಿದ್ದಾರೆ ಎಂದು ಆಯೋಗಕ್ಕೆ ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಕರೂ ಇದನ್ನು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಕೇಳಿದ ಮಾಹಿತಿಯನ್ನು ಅವರು ನೀಡುತ್ತಿಲ್ಲವೆಂದರೆ ಅವರು ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ ಎಂದೇ ಅರ್ಥ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.