ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
ನವದೆಹಲಿ: ಸಾಮಾಜಿಕ ಮಾಧ್ಯಮಗಳು ಸುಲಭವಾಗಿ ಪತ್ತೆ ಹಚ್ಚಬಹುದಾದ ಸುಳ್ಳು ಸುದ್ದಿಗಳನ್ನು ನಿರ್ಬಂಧಿಸುತ್ತಿಲ್ಲ ಅಥವಾ ಕನಿಷ್ಠ 'ನಕಲಿ' ಎಂದಾದರೂ ವರ್ಗೀಕರಿಸುತ್ತಿಲ್ಲ. ಬದಲಾಗಿ, ಈ ವಿಚಾರಗಳನ್ನು ಚುನಾವಣಾ ಸಂಸ್ಥೆಗಳಿಗೇ ಬಿಟ್ಟು, ಸತ್ಯ ಪರಿಶೀಲನೆಯಲ್ಲಿ ತೊಡಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಮಾಡುತ್ತಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶುಕ್ರವಾರ ಬೇಸರ ವ್ಯಕ್ತಪಡಿಸಿದ್ದಾರೆ.
'ಇದರಲ್ಲಿ ವ್ಯಾಪಾರದ ಹಿತಾಸಕ್ತಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಇದು, ಮೊದಲು ರೋಗ ಹರಡಿ, ನಂತರ ಔಷಧಗಳನ್ನು ಮಾರುವ ತಂತ್ರವಿದ್ದಂತೆ. ನ್ಯಾಯಯುತ ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವದ ಪಾರದರ್ಶಕತೆಯು ಇದಕ್ಕೆ ಬಲಿಯಾಗುತ್ತಿದೆ' ಎಂದು ವಿಷಾದಿಸಿದ್ದಾರೆ.
ಚುನಾವಣೆ ನಿರ್ವಹಣಾ ಸಂಸ್ಥೆಗಳ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ರಾಜೀವ್ ಕುಮಾರ್, ಸಾಮಾಜಿಕ ಮಾಧ್ಯಮ ವೇದಿಕೆಗಳು ಸಮಯ ಕೈಮೀರುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳುವ ಅಗ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
'ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಅದರಲ್ಲೂ, ಯಾರೂ ಕೇಳಿಸಿಕೊಳ್ಳದ ಅಭಿಪ್ರಾಯಗಳಿಗೆ ನಿರ್ಣಾಯಕ ವೇದಿಕೆ ಒದಗಿಸುವ ಸಾಮಾಜಿಕ ಮಾಧ್ಯಮಗಳು ನಕಲಿ, ಪರಿಶೀಲಿಸದ ಹಾಗೂ ತಪ್ಪು ನಿರೂಪಣೆಯುಳ್ಳ ಮಾಹಿತಿಗಳಿಂದ ಮಸುಕಾಗದಿರಲಿ' ಎಂದು ಸಲಹೆ ನೀಡಿದ್ದಾರೆ. ಹಾಗೆಯೇ, 'ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಶಕ್ತಿಗಳಿಗೆ ನೆರವಾಗಬೇಡಿ' ಎಂದು ಎಚ್ಚರಿಕೆ ದಾಟಿಯಲ್ಲಿ ಸಲಹೆ ನೀಡಿದ್ದಾರೆ.
ಮುಂದುವರಿದು, ಚುನಾವಣಾ ಸಂಸ್ಥೆಗಳು ಇಂತಹ ಸವಾಲುಗಳನ್ನು ಎದುರಿಸಲು ಸೂಕ್ತ ಚೌಕಟ್ಟನ್ನು ರೂಪಿಸಬೇಕು ಮತ್ತು ಅಳವಡಿಸಬೇಕು ಎಂದಿದ್ದಾರೆ.
ತಂತ್ರಜ್ಞಾನಗಳ ಅಭಿವೃದ್ಧಿಯಾಗುತ್ತಿರುವಂತೆ, ಕೃತಕ ಬುದ್ಧಿಮತ್ತೆ (ಎಐ) ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂಬುದನ್ನು ರಾಜೀವ್ ಅವರು ಒತ್ತಿ ಹೇಳಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ, ಅಕ್ರಮಗಳ ಪತ್ತೆ, ಚುನಾವಣಾ ವ್ಯವಸ್ಥೆಯ ಪರಿಣಾಮಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಎಐ ನೆರವಾಗಲಿದೆ ಎಂದು ವಿವರಿಸಿದ್ದಾರೆ.
'ಉತ್ತಮವಾಗಿ ಸಂಪನ್ಮೂಲ ಹಂಚಿಕೆ ಮಾಡುವುದು ಮತ್ತು ದಕ್ಷತೆಯನ್ನು ಉತ್ತೇಚಿಸುವ ನಿಟ್ಟಿನಲ್ಲಿ ಎಐ ಸಹಾಯ ಮಾಡಲಿದೆ. ಆದರೂ, ಇವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಮುಖ್ಯವಾಗಿ, ನಾವಿನ್ಯತೆ ಅಳವಡಿಕೆ ಹಾಗೂ ಸುಳ್ಳು ಸುದ್ದಿಗಳ ನಡುವೆ ಸತ್ಯ ಪರಿಶೀಲನೆಯೊಂದಿಗೆ ಸಮತೋಲನ ಕಾಪಾಡಿಕೊಳ್ಳುವಂತಹ ಸವಾಲು ಇದ್ದೇ ಇರುತ್ತದೆ' ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.