ADVERTISEMENT

ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಆಯ್ಕೆ; ಕಮಲಾ ಪೂರ್ವಿಕರ ಊರಲ್ಲಿ ಸಂಭ್ರಮ

ತಿರುವರೂರು

ಪಿಟಿಐ
Published 8 ನವೆಂಬರ್ 2020, 21:12 IST
Last Updated 8 ನವೆಂಬರ್ 2020, 21:12 IST
ಕಮಲಾ ಹ್ಯಾರಿಸ್ ಅವರ ಪೂರ್ವಿಕರ ಗ್ರಾಮವಾದ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನಲ್ಲಿ ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಲಾಯಿತು–ಪಿಟಿಐ ಚಿತ್ರ
ಕಮಲಾ ಹ್ಯಾರಿಸ್ ಅವರ ಪೂರ್ವಿಕರ ಗ್ರಾಮವಾದ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನಲ್ಲಿ ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಲಾಯಿತು–ಪಿಟಿಐ ಚಿತ್ರ   

ತಿರುವರೂರು (ತಮಿಳುನಾಡು): ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರ ಪೂರ್ವಿಕರ ಊರುಗಳಲ್ಲಿ ಭಾನುವಾರವೇ ದೀಪಾವಳಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಗ್ರಾಮಸ್ಥರು ಸಂಭ್ರಮಿಸಿದರು.

‘ನಮ್ಮ ಮನೆ ಮಗಳು’ ಗೆದ್ದಿದ್ದಾಳೆ ಎಂಬುದಾಗಿತುಳಸೇಂದ್ರಪುರಂ ಮತ್ತು ಪೈಂಗನಾಡು ಗ್ರಾಮಗಳ ಜನರು ಕಮಲಾ ಗೆಲುವನ್ನು ಆಚರಿಸಿದರು. ಇವು ಕಮಲಾ ಅವರ ಅಜ್ಜ ಅಜ್ಜಿಯ ಊರುಗಳು.

ಮತದಾನಕ್ಕೂ ಮುನ್ನ ಕಮಲಾ ಗೆಲುವಿಗಾಗಿಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ್ದರು. ಭಾನುವಾರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಜನರು ಹರಕೆ ತೀರಿಸಿದರು. ತಮಿಳುನಾಡು ಆಹಾರ ಸಚಿವ ಆರ್. ಕಾಮರಾಜ್ ಸಹಿತ ವಿವಿಧ ಪಕ್ಷಗಳ ರಾಜಕಾರಣಿಗಳು ಸಿಹಿ ಹಂಚಿ ಗ್ರಾಮಸ್ಥರ ಸಂಭ್ರಮದಲ್ಲಿ ಭಾಗಿಯಾದರು.ಕಮಲಾ ಅವರ ಭಾವಚಿತ್ರ ಹಿಡಿದ ನೂರಾರು ಅಭಿಮಾನಿಗಳು ರಸ್ತೆಗಳಲ್ಲಿ ಜಮಾಯಿಸಿದ್ದರು.

ADVERTISEMENT

ಕಮಲಾ ಅವರ ಅಜ್ಜ ಪಿ.ವಿ. ಗೋಪಾಲನ್ ಅವರು ಯುವಕರಾಗಿದ್ದಾಗಲೇ ತುಳಸೇಂದ್ರಪುರಂ ತೊರೆದುಹೋಗಿ, ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದರು. ಅಜ್ಜಿ ರಾಜಮ್ ಅವರುಪೈಂಗನಾಡು ಗ್ರಾಮದವರು. ಕಮಲಾ ಪೂರ್ವಿಕರು ಎಂದೋ ಊರು ತೊರೆದಿದ್ದರೂ, ಗ್ರಾಮಸ್ಥರು ಮಾತ್ರ ಅವರ ಕುಟುಂಬದ ನಂಟನ್ನು ಇಂದಿಗೂ ಇಟ್ಟುಕೊಂಡಿದ್ದಾರೆ.

ಮರು ಆಯ್ಕೆಯಿಂದ ವಂಚಿತರಾದ 11ನೇ ಅಧ್ಯಕ್ಷ ಟ್ರಂಪ್: ಎರಡನೇ ಅವಧಿಗೆ ಆಯ್ಕೆಯಾಗಲು ವಿಫಲರಾದ ಅಮೆರಿಕದ ಅಧ್ಯಕ್ಷರ ಇತಿಹಾಸದಲ್ಲಿ ಡೊನಾಲ್ಡ್ ಟ್ರಂಪ್ 11ನೆಯವರು. ಇತ್ತೀಚಿನ ನಿರ್ದರ್ಶನವೆಂದರೆ, ಜಾರ್ಜ್ ಎಚ್.ಡಬ್ಲ್ಯೂ ಬುಷ್ ಅವರು 1992ರಲ್ಲಿ ಎರಡನೇ ಬಾರಿ ಆಯ್ಕೆ ಆಗಲು ವಿಫಲರಾಗಿದ್ದರು.

ರಿಚರ್ಡ್ ನಿಕ್ಸನ್ ಅವರ ರಾಜೀನಾಮೆಯಿಂದ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಗೆರಾರ್ಲ್ಡ್ ಫೋರ್ಡ್ ಅವರು 1976ರ ಮರು ಚುನಾವಣೆಯಲ್ಲಿ ಎಡವಿದ್ದರು.ಗ್ರೋವರ್ ಕ್ಲೀವ್‌ಲ್ಯಾಂಡ್ ಅವರು 1888ರಲ್ಲಿ ಮರು ಆಯ್ಕೆ ಆಗಲಿಲ್ಲ. ಆದರೆ ನಾಲ್ಕು ವರ್ಷಗಳ ಬಿಡುವಿನ ಬಳಿಕ ಹಾಲಿ ಅಧ್ಯಕ್ಷ ಬೆಂಜಮಿನ್ ಹ್ಯಾರಿಸನ್ ಅವರನ್ನು ಪರಾಭವಗೊಳಿಸಿ ಮತ್ತೊಂದು ಅವಧಿಗೆ ಆರಿಸಿಬಂದು ಅಚ್ಚರಿ ಮೂಡಿಸಿದ್ದರು. ಅಧ್ಯಕ್ಷ ಹುದ್ದೆಗೆ ಎರಡನೇ ಬಾರಿಗೆ ಸ್ಪರ್ಧೆ ಮಾಡಲು ಪಕ್ಷದಿಂದ ನಾಮನಿರ್ದೇಶನಗೊಳ್ಳಲು ವಿಫಲರಾದವರ ಪಟ್ಟಿಯೂ ದೊಡ್ಡದಿದೆ.

ಮೇಜರ್ ಮತ್ತು ಚಾಂಪ್!: ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್ ಹಾಗೂ ಜಿಲ್ ದಂಪತಿ ಶ್ವೇತಭವನಕ್ಕೆ ಎರಡು ಜರ್ಮನ್ ಶೆಫರ್ಡ್ ಶ್ವಾನಗಳ ಜೊತೆ ಅಡಿಯಿಡಲಿದ್ದಾರೆ. ಈ ಪೈಕಿ ‘ಮೇಜರ್’ ಎಂಬ ಪರಿತ್ಯಕ್ತ ನಾಯಿಯನ್ನು ಅವರು 2018ರಲ್ಲಿ ದತ್ತು ತೆಗೆದುಕೊಂಡಿದ್ದರು. ರಕ್ಷಿಸಿ, ಪೋಷ‌ಣೆ ಮಾಡಲಾದ ಶ್ವಾನವೊಂದು ಮೊದಲ ಬಾರಿಗೆ ಶ್ವೇತಭವನ ಪ್ರವೇಶಿಸಲಿದೆ. ಮತ್ತೊಂದು ಶ್ವಾನದ ಹೆಸರು ಚಾಂಪ್.

ಸಾಮಾಜಿಕ ಜಾಲ ತಾಣಗಳಲ್ಲಿ ನೂರಾರು ಜನರು ಮೇಜರ್ ಮತ್ತು ಚಾಂಪ್‌ ಶ್ವಾನಗಳನ್ನುಡಾಟಸ್‌ ಎಂಬುದಾಗಿ ಎಂಬುದಾಗಿ ಕರೆಯಲು ಆರಂಭಿಸಿದ್ದಾರೆ. ಅಮೆರಿಕದ ಅಧ್ಯಕ್ಷರನ್ನುಪೋಟಸ್‌ (ಪ್ರೆಸಿಡೆಂಟ್ ಆಫ್‌ ದಿ ಯುನೈಟೆಡ್ ಸ್ಟೇಟ್ಸ್) ಎನ್ನಲಾಗುತ್ತದೆ.

ಮುಂಬೈನಲ್ಲಿ ಬೈಡನ್ ಸಂಬಂಧಿಕರು?: ಬೈಡನ್ ಅವರ ದೂರದ ಸಂಬಂಧಿಕರು ಮುಂಬೈನಲ್ಲಿ ನೆಲೆಸಿದ್ದಾರೆ. ಈ ಮಾತನ್ನು ಹೇಳಿದ್ದು ಸ್ವತಃ ಬೈಡನ್ ಅವರೇ. ದಶಕಗಳ ಹಿಂದೆ ಮುಂಬೈನಿಂದ ಬೈಡನ್ ಎಂಬ ಹೆಸರಿನಲ್ಲಿ ಪತ್ರವೊಂದು ಬಂದಿತ್ತು ಎಂದು 2013ರಲ್ಲಿ ಅವರು ಭಾರತಕ್ಕೆ ಚೊಚ್ಚಲ ಭೇಟಿ ನೀಡಿದ್ದಾಗ ಸ್ಮರಿಸಿಕೊಂಡಿದ್ದರು.

ಬ್ರಿಟಿಷ್ ಸರ್ಕಾರದಲ್ಲಿ ತಮ್ಮ ದೂರದ ಸಂಬಂಧಿಯೊಬ್ಬರು ಕೆಲಸ ಮಾಡಿರಬೇಕು ಎಂದು ಅವರು ಅಂದುಕೊಂಡಿದ್ದರು. ಮೊದಲ ಬಾರಿಗೆ ಸೆನೆಟರ್ ಆಗಿ ಆಯ್ಕೆಯಾದಾಗ ಬಂದ ಪತ್ರದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗಲಿಲ್ಲ ಎಂದು ಅವರು ಪಶ್ಚಾತ್ತಾಪ ಪಟ್ಟಿದ್ದರು. 2015ರಲ್ಲಿ ಅಮೆರಿಕದಲ್ಲಿ ಭಾರತೀಯ ಉದ್ಯಮ ಒಕ್ಕೂಟದ ಕಾರ್ಯಕ್ರಮದಲ್ಲೂ ಅವರು ಪತ್ರದ ಬಗ್ಗೆ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.