ADVERTISEMENT

ಅಮಿತ್ ಶಾ ಸೂಚನೆ ಮೇರೆಗೆ ಕೇಂದ್ರದ ಪಡೆಗಳು ಬಿಜೆಪಿಗೆ ಸಹಾಯ ಮಾಡಿವೆ: ಮಮತಾ

ಪಿಟಿಐ
Published 2 ಏಪ್ರಿಲ್ 2021, 2:34 IST
Last Updated 2 ಏಪ್ರಿಲ್ 2021, 2:34 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಕೇಂದ್ರದ ಪಡೆಗಳು ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಗೆ ಸಹಾಯ ಮಾಡಿದವು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಲ್ಲದೆ ಚುನಾವಣಾ ಆಯೋಗ ಕೂಡ ಶಾ ಅವರ ಸೂಚನೆಗಳನ್ನು ಪಾಲಿಸುತ್ತಿದೆ ಮತ್ತು ಅವರಅಕ್ರಮಗಳ ಬಗ್ಗೆ ತನ್ನ ಪಕ್ಷ ದಾಖಲಿಸಿದ ದೂರುಗಳ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ಅವರು, ನಂದಿಗ್ರಾಮ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

'ಸಿಆರ್‌ಪಿಎಫ್, ಬಿಎಸ್‌ಎಫ್‌ಗಳು ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿವೆ. ಅವರು ಬಿಜೆಪಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ'. 'ಹೊರಗಿನಿಂದ ಕರೆತಂದಿರುವ ಬಿಜೆಪಿ ಗೂಂಡಾಗಳನ್ನು ನಿಯಂತ್ರಿಸಬೇಕು' ಎಂದುಸುದ್ದಿಗಾರರಿಗೆ ತಿಳಿಸಿದರು.

ತನ್ನ ಪಕ್ಷವು ಹಲವಾರು ದೂರುಗಳನ್ನು ನೀಡಿದೆ. ಕ್ರಮ ಕೈಗೊಳ್ಳದಿದ್ದರೆನ್ಯಾಯಾಲಯಗಳಿಗೆ ತೆರಳುವುದಾಗಿ ಎಚ್ಚ್ರರಿಸಿದ್ದರೂ ಕೂಡ ಚುನಾವಣಾ ಆಯೋಗ 'ನಿಷ್ಕ್ರಿಯತೆ' ಯಿಂದ ಕೂಡಿದೆ. ನಾವು 63 ದೂರುಗಳನ್ನು ದಾಖಲಿಸಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಇದನ್ನು ಒಪ್ಪಲಾಗುವುದಿಲ್ಲ. ಚುನಾವಣಾ ಆಯೋಗ ಕೂಡ ಶಾ ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ದೂಷಿಸಿದರು.

ಹೊರರಾಜ್ಯಗಳಿಂದ ಬಂದ ಗೂಂಡಾಗಳು ಇಲ್ಲಿ ಅವಘಡಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿರುವ ಅವರು,ಬಿಜೆಪಿಯು ಹಣ ಮತ್ತು ತನ್ನ ಶಕ್ತಿಯನ್ನು ಬಳಸಿರುವುದರಿಂದ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆಯಾಗುತ್ತಿದೆ. ನಂದಿಗ್ರಾಮದ ಬಗ್ಗೆ ನನಗೆ ಚಿಂತೆ ಇಲ್ಲ, ಅಲ್ಲಿ ಗೆಲುವಿನ ವಿಶ್ವಾಸವಿದೆ. (ಆದರೆ) ನಾನು ಪ್ರಜಾಪ್ರಭುತ್ವದ ಬಗ್ಗೆ ಚಿಂತೆ ಮಾಡುತ್ತೇನೆ ಎಂದು ಹೇಳಿದರು.

ಮೊದಲ ಮತ್ತು ಎರಡನೇ ಹಂತದಲ್ಲಿ ಚುನಾವಣೆ ನಡೆದಿರುವ 60 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಾಗಿ ಮಮತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT