ADVERTISEMENT

ಕೆಲವೊಮ್ಮೆ ತಪ್ಪಾಗಿ ಕೋವಿಡ್ ಲಸಿಕೆ ಪ್ರಮಾಣಪತ್ರ ನೀಡಿರುವುದು ನಿಜ: ಕೇಂದ್ರ

ಡೆಕ್ಕನ್ ಹೆರಾಲ್ಡ್
Published 11 ಡಿಸೆಂಬರ್ 2021, 1:34 IST
Last Updated 11 ಡಿಸೆಂಬರ್ 2021, 1:34 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ನವದೆಹಲಿ: ಕೋವಿಡ್ ಲಸಿಕೆ ಪ್ರಮಾಣಪತ್ರಗಳನ್ನು ಕೆಲವೊಮ್ಮೆ ತಪ್ಪಾಗಿ ವಿತರಿಸಿರುವ ಪ್ರಕರಣಗಳು ವರದಿಯಾಗಿರುವುದು ನಿಜ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ. ಡಾಟಾ ಎಂಟ್ರಿ ಲೋಪಗಳಿಂದಾಗಿ ಕೆಲವೊಮ್ಮೆ ಹೀಗಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

‘ಕೆಲವೊಂದು ಪ್ರತ್ಯೇಕ ಸಂದರ್ಭಗಳಲ್ಲಿ ಲಸಿಕೆ ಪಡೆಯದವರಿಗೆ, ಮೃತಪಟ್ಟವರ ಹೆಸರಿನಲ್ಲಿ ಪ್ರಮಾಣಪತ್ರ ನೀಡಿದ ಉದಾಹರಣೆಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಿಕೆ ವೇಳೆ ಸಿಬ್ಬಂದಿಯು ಮಾಡಿರುವ ಅಜಾಗರೂಕ ಡಾಟಾ ಎಂಟ್ರಿಗಳಿಂದಾಗಿ ಈ ರೀತಿಯ ಪ್ರಮಾದಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಲಸಿಕೆ ಪ್ರಮಾಣಪತ್ರ ನೀಡಿಕೆಯಲ್ಲಿನ ಲೋಪಕ್ಕೆ ಸಂಬಂಧಿಸಿ ಸರ್ಕಾರವನ್ನು ಪ್ರಶ್ನಿಸಿದ್ದರು.

ADVERTISEMENT

ಬಿಹಾರಾದ ಅರವಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರ ಹೆಸರಿನಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ ಮತ್ತು ಕೋವಿಡ್-19 ಲಸಿಕೆ ನೀಡಿದ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಾದ ಪಟ್ಟಿಯಿಂದ ತಿಳಿದುಬಂದಿತ್ತು.

ಇದು ದೇಶದಾದ್ಯಂತ ಸುದ್ದಿಯಾಗಿದ್ದಲ್ಲದೆ, ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಈ ಕುರಿತು ಪ್ರತಿಕ್ರಿಯಿಸಿದ್ದ ಅರವಲ್ ಜಿಲ್ಲಾಧಿಕಾರಿ ಜೆ. ಪ್ರಿಯದರ್ಶಿನಿ, ‘ಸಿವಿಲ್ ಸರ್ಜನ್ ದಾಖಲೆಗಳನ್ನು ಪರಿಶೀಲಿಸಿದಾಗ ಈ ಮುಜುಗರದ ಸಂಗತಿ ಕಳೆದ 20 ದಿನಗಳ ಹಿಂದೆಯೇ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಇಬ್ಬರು ಡೇಟಾ ಎಂಟ್ರಿ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ' ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.