ADVERTISEMENT

ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧ: ಹರ್ಷವರ್ಧನ್

ಏಜೆನ್ಸೀಸ್
Published 24 ಜನವರಿ 2021, 11:07 IST
Last Updated 24 ಜನವರಿ 2021, 11:07 IST
   

ನವದೆಹಲಿ: ‌ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪ್ರಧಾನಿ ನರೇಂದ್ರ ಮೋದಿಯವರ ‘ಮಹಿಳೆಯರ ನೇತೃತ್ವದ ಭಾರತ’ ದೃಷ್ಟಿಕೋನವನ್ನು ವಿಜ್ಞಾನ ಜ್ಯೋತಿ ಕಾರ್ಯಕ್ರಮದ ಮೂಲಕ ಮತ್ತಷ್ಟು ಉತ್ತೇಜಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

ಹೆಣ್ಣು ಮಕ್ಕಳ ರಾಷ್ಟ್ರೀಯ ದಿನದ ಅಂಗವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣದ ನಿಟ್ಟಿನಲ್ಲಿ ಮಾಡಿರುವ ಸಾಧನೆ ಮತ್ತು ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

‘ದೇಶದ ಹೆಣ್ಣು ಮಕ್ಕಳನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ (ಎಸ್‌ಟಿಇಎಂ–ಸ್ಟೆಮ್‌) ಕ್ಷೇತ್ರಗಳತ್ತ ಆಕರ್ಷಿಸಲು ಹಾಗೂ ಸ್ಟೆಮ್‌ ಶಿಕ್ಷಣ ಮೌಲ್ಯ ಹೆಚ್ಚಿಸುವ ವಿಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ನಾವು ಶಾಲಾ ಮಟ್ಟದಲ್ಲಿ ಆರಂಭಿಸಿದ್ದೇವೆ. ಸಂಶೋಧನೆ ಮತ್ತು ವೃತ್ತಿಜೀವನದ ಅವಕಾಶಗಳನ್ನು ಒದಗಿಸುವ ನಮ್ಮ ‘ಮಹಿಳಾ ವಿಜ್ಞಾನಿಗಳ ಯೋಜನೆ’ ಅಡಿಯಲ್ಲಿ ಸುಮಾರು 1,400 ಮಹಿಳಾ ವಿಜ್ಞಾನಿಗಳು ಕಳೆದ ಮೂರು ವರ್ಷಗಳಲ್ಲಿ ಲಾಭ ಪಡೆದಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹೆಣ್ಣುಮಕ್ಕಳ ಸ್ಟೆಮ್‌ ಕಲಿಕೆಗೆ ಉತ್ತೇಜನ ನೀಡಲು ಮತ್ತು ಅವರನ್ನು ಸ್ಟೆಮ್‌ ವೃತ್ತಿಗಳತ್ತ ಸೆಳೆಯಲು ‘ವಿಜ್ಞಾನ ಜ್ಯೋತಿ’ ಕಾರ್ಯಕ್ರಮವನ್ನು 2019ರಲ್ಲಿ ಆರಂಭಿಸಿತು.

ಮತ್ತೊಂದು ಟ್ವೀಟ್‌ನಲ್ಲಿ ಕೆಐಆರ್‌ಎಎನ್‌ (ಪೋಷಣೆಯ ಮೂಲಕ ಸಂಶೋಧನಾ ಪ್ರಗತಿಯಲ್ಲಿ ಜ್ಞಾನದ ತೊಡಗಿಸಿಕೊಳ್ಳುವಿಕೆ) ಯೋಜನೆ ಬಗ್ಗೆ ಪ್ರಸ್ತಾಪಿಸಿರುವ ಸಚಿವರು, ಈ ಯೋಜನೆಯ ಮೂಲಕ ಕಳೆದ ಐದು ಹಾಗೂ ಪ್ರಸ್ತುತ ವರ್ಷದಲ್ಲಿ ಸುಮಾರು 2,200 ಮಹಿಳಾ ವಿಜ್ಞಾನಿಗಳು ‘ಆತ್ಮನಿರ್ಭರ ಭಾರತ್‌’ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೆಣ್ಣುಮಕ್ಕಳ ವಿಚಾರದಲ್ಲಿ ಸಮಾಜವನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿವರ್ಷ ಜನವರಿ 24ನ್ನು ಹೆಣ್ಣು ಮಕ್ಕಳ ರಾಷ್ಟ್ರೀಯ ದಿನವನ್ನಾಗಿ ಆಚರಿಸುವುದಾಗಿ 2008ರಲ್ಲಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.