ನವದೆಹಲಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್)ನಿಗದಿಪಡಿಸಿರುವ ವಾರ್ಷಿಕ ₹ 8 ಲಕ್ಷ ಆದಾಯ ಮಿತಿಯನ್ನು ಪರಿಷ್ಕರಿಸಲು ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಸರ್ಕಾರ ಮಂಗಳವಾರ ರಚಿಸಿದೆ.
ಹಣಕಾಸು ಸಚಿವಾಲಯದ ಮಾಜಿ ಕಾರ್ಯದರ್ಶಿ ಅಜಯಭೂಷಣ್ ಪಾಂಡೆ, ಭಾರತೀಯ ಸಮಾಜವಿಜ್ಞಾನ ಸಂಶೋಧನಾ ಪರಿಷತ್ತಿನ ಸದಸ್ಯ ಕಾರ್ಯದರ್ಶಿ ವಿ.ಕೆ.ಮಲ್ಹೋತ್ರ ಹಾಗೂ ಪ್ರಧಾನ ಆರ್ಥಿಕ ಸಲಹೆಗಾರ ಸಂಜಯ್ ಸನ್ಯಾಲ್ ಅವರು ಈ ಸಮಿತಿಯಲ್ಲಿ ಇದ್ದಾರೆ.
ಮೂರು ವಾರಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಸಮಿತಿಗೆ ಸೂಚಿಸಿದೆ.
‘ಆರ್ಥಿಕವಾಗಿ ಹಿಂದುಳಿದ ವರ್ಗವನ್ನು ಗುರುತಿಸಲು ವಿವಿಧ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿರುವ ವಿಧಾನಗಳನ್ನು ಈ ತ್ರಿಸದಸ್ಯ ಸಮಿತಿ ಪರಿಶೀಲನೆ ನಡೆಸುವುದು ಹಾಗೂ ಈ ಉದ್ದೇಶಕ್ಕಾಗಿ ಭವಿಷ್ಯದಲ್ಲಿ ಅಳವಡಿಸಿಕೊಳ್ಳಬೇಕಾದ ಮಾನದಂಡಗಳ ಕುರಿತು ಶಿಫಾರಸು ಮಾಡುವುದು’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
‘ಆದಾಯ ಮಿತಿ ಮಾನದಂಡ ಪರಿಷ್ಕರಿಸಲು ಸಮಿತಿ ರಚಿಸಲಾಗುವುದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್, ವಿಕ್ರಂ ನಾಥ್ ಅವರಿದ್ದ ಪೀಠಕ್ಕೆ ನ. 25ರಂದು ತಿಳಿಸಿದ್ದರು.
ಅಖಿಲ ಭಾರತ ಕೋಟಾ ಸೀಟುಗಳಿಗೆ ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಮೀಸಲಾತಿ ಸಿಂಧುತ್ವ ಕುರಿತು ತೀರ್ಮಾನ ಕೈಗೊಳ್ಳುವವರೆಗೂನೀಟ್–ಪಿ.ಜಿ ಕೌನ್ಸೆಲಿಂಗ್ ಮುಂದೂಡಬೇಕು ಎಂದು ಸುಪ್ರೀಂಕೋರ್ಟ್ ಕಳೆದ ಅಕ್ಟೋಬರ್ 25ರಂದು ಕೇಂದ್ರಕ್ಕೆ ನಿರ್ದೇಶಿಸಿತ್ತು.
ಸಂವಿಧಾನದ 15ನೇ ವಿಧಿ ಅನ್ವಯ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ಘೋಷಿಸಿದ್ದ ಕೇಂದ್ರ ಸರ್ಕಾರ, ಈ ಸೌಲಭ್ಯ ಪಡೆಯಲು 2019ರ ಜನವರಿ 17ರಂದು ಆದಾಯ ಮಿತಿಯನ್ನು ನಿಗದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.