ADVERTISEMENT

ಪ್ರತಿಭಟನಾನಿರತ ರೈತರ ಬಗ್ಗೆ ಕೇಂದ್ರ ಅಸಡ್ಡೆ ತೋರುತ್ತಿದೆ: ಹರ್‌ಸಿಮ್ರತ್ ಕೌರ್

farmers

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 10:01 IST
Last Updated 17 ಸೆಪ್ಟೆಂಬರ್ 2021, 10:01 IST
ಶಿರೋಮಣಿ ಅಕಾಲಿದಳದ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್: ಪಿಟಿಐ ಚಿತ್ರ
ಶಿರೋಮಣಿ ಅಕಾಲಿದಳದ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್: ಪಿಟಿಐ ಚಿತ್ರ   

ನವದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರೈತರ ಅಗತ್ಯಗಳ ಬಗ್ಗೆ ಅಸಡ್ಡೆ ಹೊಂದಿದೆ ಎಂದು ಶಿರೋಮಣಿ ಅಕಾಲಿದಳದ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ವಾಗ್ದಾಳಿ ನಡೆಸಿದ್ದಾರೆ.

‘ಹಲವು ರೈತರು ಪ್ರತಿಭಟನೆ ವೇಳೆಯೇ ಪ್ರಾಣ ಬಿಟ್ಟಿದ್ದಾರೆ. ಅನೇಕರು ಈಗಲೂ ರಾಜಧಾನಿಯ ಗಡಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಸರ್ಕಾರ (ಕೇಂದ್ರ) ಮಾತ್ರ ಅವರ ಬಗ್ಗೆ ಅಸಡ್ಡೆ ತೋರುತ್ತಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ’ಎಂದು ಅವರು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗುಡುಗಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಸಂಚಾರ ಪೊಲೀಸರು ಶುಕ್ರವಾರ ನಿರ್ದಿಷ್ಟ ರಸ್ತೆಗಳನ್ನು ಮುಚ್ಚುವ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗಳಿಂದಾಗಿ ಆಗುವ ಅನಾನುಕೂಲತೆಯಿಂದ ಪಾರಾಗಲು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.

ADVERTISEMENT

ಪಕ್ಷದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಶಿರೋಮಣಿ ಅಕಾಲಿದಳವು ಗುರುದ್ವಾರ ತಲಬ್ ಗಂಜ್ ಸಾಹಿಬ್‌ನಿಂದ ಸಂಸತ್ ಭವನದವರೆಗೆ ರ್‍ಯಾಲಿಗೆ ಕರೆ ನೀಡಿತ್ತು.

ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ವಾಹನಗಳನ್ನು ತಪಾಸಣೆ ಮಾಡಿದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆ ವೇಳೆ ನಡೆದಂತೆ ಅಹಿತಕರ ಘಟನೆ ಮರುಕಳಿಸದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.