ADVERTISEMENT

ಮಣಿಪುರ: ಶಾಂತಿ ಮರುಸ್ಥಾಪನೆಗೆ ಕೆಲಸ- ಲೋಕಸಭೆಯಲ್ಲಿ ಪ್ರಧಾನಿ ಭರವಸೆ

ಪಿಟಿಐ
Published 10 ಆಗಸ್ಟ್ 2023, 17:02 IST
Last Updated 10 ಆಗಸ್ಟ್ 2023, 17:02 IST
   

ನವದೆಹಲಿ: ಕೋಮು ಸಂಘರ್ಷದಿಂದ ನಲುಗಿರುವ ಮಣಿಪುರ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರವು ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಭರವಸೆ ನೀಡಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. 

ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಪರವಾಗಿ ಕಾಂಗ್ರೆಸ್‌ ಸಂಸದ ಗೌರವ್‌ ಗೊಗೋಯಿ ಅವರು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಮೋದಿ ಅವರು ಲೋಕಸಭೆಯಲ್ಲಿ ಗುರುವಾರ ಉತ್ತರ ನೀಡಿದರು. 

ರಾಹುಲ್‌ ಗಾಂಧಿ ಅವರ ಭಾಷಣವನ್ನು ಉಲ್ಲೇಖಿಸಿ, ಕೆಲವರು ‘ಭಾರತ ಮಾತೆ’ಯ ಸಾವು ಬಯಸುತ್ತಿದ್ದಾರೆ. ಇಂಥ ಹೇಳಿಕೆಯು ಪ್ರತಿಯೊಬ್ಬ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಪ್ರತಿಪಾದಿಸಿದರು.

ADVERTISEMENT

ಕಾಂಗ್ರೆಸ್‌ ಆಡಳಿತವನ್ನು ಟೀಕಿಸುವುದಕ್ಕೇ ಆದ್ಯತೆ ನೀಡಿದ ಅವರು, ಮಣಿಪುರದಲ್ಲಿ ನಡೆದಿರುವ ಹಿಂಸಾಚಾರ ನೋವುಂಟು ಮಾಡಿದೆ. ಮಹಿಳೆಯರ ವಿರುದ್ಧದ ಅಪರಾಧ ಒಪ್ಪಿತವಲ್ಲ. 

ಈಶಾನ್ಯ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯಗಳ ವಿವರ ನೀಡಿದ ಅವರು, ‘ಈಶಾನ್ಯದ ರಾಜ್ಯಗಳಿಗೆ ನಾನೇ 50 ಸಾರಿಯಾದರೂ ಭೇಟಿ ನೀಡಿದ್ದೇನೆ. ನಮ್ಮ ಸಚಿವರು 400ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ’ ಎಂದರು.

‘ಪ್ರಜಾಪ್ರಭುತ್ವ, ಸಂವಿಧಾನದ ಕೊಲೆ ಕುರಿತು ಮಾತನಾಡುವ ಈ ಜನರೇ (ಕಾಂಗ್ರೆಸ್‌) ಭಾರತವನ್ನು ಮೂರು ತುಂಡುಗಳಾಗಿಸಿದರು. ಗುಲಾಮಗಿರಿಯಿಂದ ಭಾರತ ಮಾತೆಯನ್ನು ಮುಕ್ತಗೊಳಿಸುವ ಕಾಲ ಬಂದಾಗ ಆಕೆಯ ಅಂಗಾಂಗಗಳನ್ನು ಕತ್ತರಿಸಿದರು’ ಎಂದು ಟೀಕಿಸಿದರು.

ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದ ಅವರು,  ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ 1966ರಲ್ಲಿ ಮಿಜೋರಾಂ ನಾಗರಿಕರ ಮೇಲೆ ದಾಳಿಗೆ ವಾಯುಪಡೆ ಬಳಸಿದ್ದರು. 80ರ ದಶಕದಲ್ಲಿ ಅಕಾಲ್‌ ತಖ್ತ್‌ ಮೇಲೆ ಸೇನಾದಾಳಿ ನಡೆದಿತ್ತು ಎಂದರು.

ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಗೌರವ್‌ ಗೊಗೋಯಿ ಮಂಡಿಸಿದ್ದ ನಿರ್ಣಯವನ್ನು ಮತಕ್ಕೆ ಹಾಕಿದಾಗ ವಿರೋಧ  ಪಕ್ಷಗಳ ಸದಸ್ಯರು ಸದನದಲ್ಲಿ ಇರಲಿಲ್ಲ. ಅದಕ್ಕೂ ಮೊದಲೇ ಸಭಾತ್ಯಾಗ ಮಾಡಿದ್ದರು. ಶಿರೋಮಣಿ ಅಕಾಲಿದಳದ (ಅಮೃತಸರ) ಸಂಗ್ರೂರು ಸಂಸದ ಸಿಮ್ರಾನ್‌ಜಿತ್‌ ಸಿಂಗ್‌ ಮಾನ್‌ ಅವರು ಮಾತ್ರ ವಿರೋಧ ಪಕ್ಷಗಳ ಸಾಲಿನಲ್ಲಿ ಇದ್ದರು. 

ನರೇಂದ್ರ ಮೋದಿ
ಗಡಿಯಲ್ಲಿ ಭಯೋತ್ಪಾದಕರ ದಾಳಿ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳಿಗೆ ಪಾಕಿಸ್ತಾನದ ಮೇಲೆ ಹೆಚ್ಚು ನಂಬಿಕೆ. ಭಾರತೀಯರ ಭಾವನೆಗಳನ್ನು ಅವು ಕಡೆಗಣಿಸುತ್ತಿವೆ
-ನರೇಂದ್ರ ಮೋದಿ ಪ್ರಧಾನಿ
ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ ಫೋಬಿಯಾ ಕಾಡುತ್ತಿದೆ. ಅದಕ್ಕಾಗಿ ಭಾಷಣದಲ್ಲಿ ಕಾಂಗ್ರೆಸ್‌ ಬಗ್ಗೆ ದೀರ್ಘವಾಗಿ ಮಣಿಪುರ ಕುರಿತು ಕಡಿಮೆ ಮಾತನಾಡಿದ್ದಾರೆ.
-ಗೌರವ್‌ ಗೊಗೋಯಿ, ಕಾಂಗ್ರೆಸ್‌ ಉಪನಾಯಕ ಲೋಕಸಭೆ 
ಪ್ರಧಾನಿ ಭಾಷಣದಲ್ಲಿ ಹೊಸದೇನಿದೆ? ಅವರು ದೇಶಕ್ಕೆ ಏನು ಹೇಳುತ್ತಿದ್ದಾರೆ? ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರಸ್ತಾಪವಾಗಿದ್ದ ಅಂಶಗಳಿಗೆ ಅವರಿಂದ ಉತ್ತರವೇ ಇರಲಿಲ್ಲ.
-ಶಶಿ ತರೂರ್‌, ಕಾಂಗ್ರೆಸ್‌ ಸದಸ್ಯ

2 ಗಂಟೆಯ ಭಾಷಣದ ನಂತರ‘ಮಣಿಪುರ ಬೆಳವಣಿಗೆ’ ಪ್ರಸ್ತಾಪ!

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಗುರುವಾರ ಲೋಕಸಭೆಯಲ್ಲಿ ಉತ್ತರಿಸಿದ ಪ್ರಧಾನಿ ಮೋದಿ ಭಾಷಣದ ಮೊದಲ 90 ನಿಮಿಷ ಮಣಿಪುರ ಬೆಳವಣಿಗೆಯ ಉಲ್ಲೇಖವೇ ಇರಲಿಲ್ಲ. ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. ಒಂದೆಡೆ ಮೋದಿ ಮಾತನಾಡುತ್ತಿದ್ದರೆ ವಿರೋಧಪಕ್ಷಗಳ ಸಾಲಿನಿಂದ ‘ಮಣಿಪುರ ಮಣಿಪುರ’ ಘೋಷಣೆ ಮೊಳಗುತ್ತಿತ್ತು. ಜನಾಂಗೀಯ ಸಂಘರ್ಷ ಪೀಡಿತ ಮಣಿಪುರ ಕುರಿತು ಮಾತನಾಡಬೇಕು ಎಂದು ವಿರೋಧಪಕ್ಷಗಳು ಆಗ್ರಹಪಡಿಸುತ್ತಿದ್ದವು. ಒಂದೂವರೆ ಗಂಟೆ ಭಾಷಣದದಲ್ಲಿ ಮಣಿಪುರ ವಿಷಯವೇ ಪ್ರಸ್ತಾಪವಾಗದಿದ್ದಾಗ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಸಭಾತ್ಯಾಗ ಮಾಡಿದರು. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸದಸ್ಯರು ಹಿಂದೆಯೇ ಸಭಾತ್ಯಾಗ ಮಾಡಿದರು. ಪ್ರಧಾನಿ ಅವರು ಎರಡು ಗಂಟೆ ಭಾಷಣದ ಬಳಿಕ ಮಣಿಪುರ ಬೆಳವಣಿಗೆಯನ್ನು ಉಲ್ಲೇಖಿಸಿದರು. ನಿಲುವಳಿ ಮೇಲೆ ಚರ್ಚೆ ಆರಂಭಿಸಿದ್ದ ಗೌರವ್‌ ಗೊಗೋಯಿ ಅವರು ‘ಮಣಿಪುರ ಕುರಿತು ಪ್ರಧಾನಿ ಮಾತನಾಡಬೇಕು ಎಂಬುದು ಅವಿಶ್ವಾಸ ನಿರ್ಣಯ ಮಂಡನೆಯ ಉದ್ದೇಶ ಆಗಿತ್ತು. ಅದು ಈಡೇರಲಿಲ್ಲ. ಪ್ರಧಾನಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು’ ಎಂದರು. ‘ಪ್ರಧಾನಿ ಮೋದಿ ರಾಜಕೀಯ ಭಾಷಣ ಮಾಡಿದರು‘ ಎಂದು ಡಿಎಂಕೆ ಸದಸ್ಯ ಟಿ.ಆರ್‌.ಬಾಲು ಟೀಕಿಸಿದರೆ ಕಾಂಗ್ರೆಸ್‌ನ ಕಾರ್ತಿ ಚಿದಂಬರಂ ‘ಮಣಿಪುರ ಕುರಿತು ಮಾತನಾಡದ ನಿಲುವು ಖಂಡಿಸಿ ಸಭಾತ್ಯಾಗ ಮಾಡಿದೆವು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.