ADVERTISEMENT

ರಥಯಾತ್ರೆಗೆ ಅವಕಾಶ ನೀಡುವಂತೆ ‘ಸುಪ್ರೀಂ’ಗೆ ಕೇಂದ್ರದ ಮನವಿ

ಪಿಟಿಐ
Published 22 ಜೂನ್ 2020, 7:47 IST
Last Updated 22 ಜೂನ್ 2020, 7:47 IST
ಜಗನ್ನಾಥ ರಥಯಾತ್ರೆ–ಸಾಂದರ್ಭಿಕ ಚಿತ್ರ
ಜಗನ್ನಾಥ ರಥಯಾತ್ರೆ–ಸಾಂದರ್ಭಿಕ ಚಿತ್ರ   

ನವದೆಹಲಿ: ಪುರಿಯ ಐತಿಹಾಸಿಕ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಕೊರೊನಾ ಸೋಂಕು ಇರುವ ಕಾರಣ ಸಾರ್ವಜನಿಕರು ಭಾಗವಹಿಸುವುದಕ್ಕೆ ಅವಕಾಶ ಇಲ್ಲದೆ, ಸಾಂಪ್ರದಾಯಿಕವಾಗಿ ರಥಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ.

'ಈ ತಿಂಗಳ 18ರಂದು ನ್ಯಾಯಾಲಯ ರಥಯಾತ್ರೆಗೆ ತಡೆಯಾಜ್ಞೆ ನೀಡಿದ್ದು, ಆ ತೀರ್ಪನ್ನು ಪುನರ್‌ ಪರಿಶೀಲಿಸಬೇಕು. ಕೋಟ್ಯಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು' ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮನವಿ ಮಾಡಿದರು. ಕೇಂದ್ರ ಸರ್ಕಾರದ ಈ ಮನವಿಗೆ ಒಡಿಶಾ ಸಹ ಬೆಂಬಲ ಸೂಚಿಸಿದೆ.

ಲಕ್ಷಾಂತರ ಜನರು ಭಾಗವಹಿಸುವ ರಥಯಾತ್ರೆ ನಿಗದಿಯಂತೆ ಈ ತಿಂಗಳ 23ರಿಂದ ಆರಂಭವಾಗಬೇಕಿತ್ತು. ಆದರೆ, ಸುಪೀಂ ಕೋರ್ಟ್‌ ಕೊರೊನಾ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ತಿಂಗಳ 18ರಂದು ತಡೆಯಾಜ್ಞೆ ನೀಡಿತ್ತು.

ADVERTISEMENT

ಪುರಿಯ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ರಚಿಸಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಒಪ್ಪಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.