ADVERTISEMENT

ಜನರ ಸಂಕಟದಿಂದ ಲಾಭ ಗಳಿಸುವ ಕೇಂದ್ರ: ಇಂಧನ ಬೆಲೆ ಏರಿಕೆ ವಿರುದ್ಧ ಸೋನಿಯಾ ಕಿಡಿ

ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಪಿಟಿಐ
Published 21 ಫೆಬ್ರುವರಿ 2021, 13:34 IST
Last Updated 21 ಫೆಬ್ರುವರಿ 2021, 13:34 IST
ಸೋನಿಯಾ ಗಾಂಧಿ (ಪಿಟಿಐ ಚಿತ್ರ)
ಸೋನಿಯಾ ಗಾಂಧಿ (ಪಿಟಿಐ ಚಿತ್ರ)   

ನವದೆಹಲಿ: ಇಂಧನ ಹಾಗೂ ಅನಿಲ ದರ ಏರಿಕೆ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ‍ಪಡಿಸಿದ್ದಾರೆ.

ಸರ್ಕಾರವು ಜನರ ದುಃಖ, ಸಂಕಟದಿಂದ ಲಾಭ ಗಳಿಸುತ್ತಿದೆ ಎಂದು ಆರೋಪಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದರ ಏರಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಜಿಡಿಪಿ ಪಾತಾಳಕ್ಕೆ ಕುಸಿಯುತ್ತಿದೆ. ಅನಿಲ, ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಇಂಧನ ಮತ್ತು ಅನಿಲ ಬೆಲೆ ವಿಪರೀತ ಏರಿಕೆಯಾಗುತ್ತಿರುವುದಕ್ಕೆ ಸಂಬಂಧಿಸಿ ನಾಗರಿಕರ ದುಃಖ ಮತ್ತು ಸಂಕಟವನ್ನು ನಿಮ್ಮ ಗಮನಕ್ಕೆ ತರುವ ಸಲುವಾಗಿ ಈ ಪತ್ರ ಬರೆಯುತ್ತಿದ್ದೇನೆ. ಮತ್ತೊಂದೆಡೆ, ದೇಶದಲ್ಲಿ ಉದ್ಯೋಗ, ವೇತನ, ಆದಾಯದಲ್ಲಿ ಕಡಿತವಾಗುತ್ತಿದೆ. ಮಧ್ಯಮ ವರ್ಗ ಮತ್ತು ಬಡತನದ ಅಂಚಿನಲ್ಲಿರುವ ಸಮುದಾಯಗಳು ಸಂಕಷ್ಟಕ್ಕೀಡಾಗಿವೆ. ಹಣದುಬ್ಬರ ಏರಿಕೆ, ಗೃಹೋಪಯೋಗಿ ಹಾಗೂ ಅಗತ್ಯ ವಸ್ತುಗಳ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಸವಾಲುಗಳನ್ನು ಹೆಚ್ಚಿಸಿದೆ’ ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.

‘ಬೇಸರದ ವಿಚಾರವೆಂದರೆ, ಇಂಥ ಕಷ್ಟಕರ ಸಮಯದಲ್ಲಿ ಜನರ ದುಃಖ ಹಾಗೂ ಸಂಕಟವನ್ನು ಸರ್ಕಾರವು ಲಾಭವಾಗಿ ಪರಿವರ್ತಿಸಿಕೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ.

ಸತತ 12ನೇ ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಶನಿವಾರ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹97 ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ ₹88 ತಲುಪಿತ್ತು.

‘ಬೆಲೆ ಏರಿಕೆ ಹಿಂಪಡೆಯುವ ಮೂಲಕ ಮಧ್ಯಮವರ್ಗ, ವೇತನ ಪಡೆಯುವ ವರ್ಗ, ರೈತರು ಹಾಗೂ ಬಡ ಜನರಿಗೆ ಪ್ರಯೋಜನವಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ’ ಎಂದೂ ಸೋನಿಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.