ರಾಜೇಂದ್ರ ಚೋಳ–1
ಕೃಪೆ: X/@MinOfCultureGoI
ನವದೆಹಲಿ: ಕೇಂದ್ರ ಸರ್ಕಾರವು ಚೋಳ ಸಾಮ್ರಾಟರ ಪರಂಪರೆಯನ್ನು ಆಚರಿಸುವ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಜುಲೈ 23 ರಿಂದ 27ರ ವರೆಗೆ ಉತ್ಸವ ಆಯೋಜಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಾರೋಪದಲ್ಲಿ ಪಾಳ್ಗೊಳ್ಳಲಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಬುಧವಾರ ತಿಳಿಸಿದೆ.
ಮಹಾನ್ ಚೋಳ ಸಾಮ್ರಾಟ ರಾಜೇಂದ್ರ ಚೋಳ–1 ಅವರ ಜನ್ಮದಿನಾಚರಣೆಯನ್ನು ಗಂಗೈಕೊಂಡ ಚೋಳಪುರಂನಲ್ಲಿ ಜುಲೈ 23ರಿಂದ 27ರ ವರೆಗೆ 'ಆದಿ ತಿರುಪತಿರೈ ಉತ್ಸವ'ದೊಂದಿಗೆ ಆಚರಿಸಲು ಸಚಿವಾಲಯ ಸಜ್ಜಾಗಿದೆ.
ಈ ವಿಶೇಷ ಆಚರಣೆ ವೇಳೆ, ರಾಜೇಂದ್ರ ಚೋಳ–1 ಅವರು ಸಾವಿರ ವರ್ಷಗಳ ಹಿಂದೆ ಆಗ್ನೇಯ ಏಷ್ಯಾದತ್ತ ಸಾಗರ ಮಾರ್ಗವಾಗಿ ಕೈಗೊಂಡ ಐತಿಹಾಸಿಕ ದಂಡಯಾತ್ರೆ ಹಾಗೂ ಚೋಳ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿರುವ ಗಂಗೈಕೊಂಡ ಚೋಳಾಪುರಂ ದೇವಾಲಯದ ನಿರ್ಮಾಣವನ್ನು ಸ್ಮರಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.
'ಶೈವ ಸಿದ್ಧಾಂತದ ತಾತ್ವಿಕ ಬೇರುಗಳು ಹಾಗೂ ಅದರ ಪ್ರಸಾರದಲ್ಲಿ ತಮಿಳಿನ ಪಾತ್ರವನ್ನು ಎತ್ತಿ ತೋರಿಸುವುದು, ತಮಿಳು ಸಂಸ್ಕೃತಿಯ ಆಧ್ಯಾತ್ಮಿಕ ರಚನೆಯಲ್ಲಿ ನಾಯನ್ಮರ್ (ಶೈವ ಸಂತರ) ಕೊಡುಗೆಯನ್ನು ಗೌರವಿಸುವುದು; ಶೈವ ಧರ್ಮ, ದೇವಾಲಯಗಳ ವಾಸ್ತುಶಿಲ್ಪ, ಸಾಹಿತ್ಯ ಮತ್ತು ಶಾಸ್ತ್ರೀಯ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜೇಂದ್ರ ಚೋಳ–1 ಹಾಗೂ ಚೋಳ ವಂಶಸ್ಥರು ನೀಡಿದ ಅಸಾಧಾರಣ ಕೊಡುಗೆಗಳನ್ನು ಆಚರಿಸುವುದು ಈ ಉತ್ಸವದ ಉದ್ದೇಶವಾಗಿದೆ' ಎಂದು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಉತ್ಸವದ ಸಮಾರೋಪವು ಜುಲೈ 27 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರೊಂದಿಗೆ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ಎಲ್.ಮುರುಗನ್ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ರಾಜೇಂದ್ರ ಚೋಳ–1 (1014–1044) ಭಾರತದ ಅತ್ಯಂತ ಪ್ರಭಾವಿ ಹಾಗೂ ದೂರದೃಷ್ಟಿಯ ಆಡಳಿತಗಾರ ಎನಿಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ಚೋಳ ಸಾಮ್ರಾಜ್ಯವು ದಕ್ಷಿಣ ಭಾರತ ಮತ್ತು ಆಗ್ನೇಯ ಏಷ್ಯಾ ಭಾಗದಾದ್ಯಂತ ವಿಸ್ತರಣೆಗೊಂಡಿತ್ತು ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.