ADVERTISEMENT

ಮೀರಾಬಾಯಿ ಚಾನು ಗ್ರಾಮದಲ್ಲಿ ಕೈಮಗ್ಗ ಕ್ಲಸ್ಟರ್ ಸ್ಥಾಪನೆ: ಕೇಂದ್ರ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 14:40 IST
Last Updated 21 ನವೆಂಬರ್ 2021, 14:40 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   
ಗುವಾಹಟಿ: ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ಮಣಿಪುರದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಗ್ರಾಮ ನಾಂಗ್‌ಪೋಕ್ ಕಾಕ್ಚಿಂಗ್‌ನಲ್ಲಿ ಕೇಂದ್ರ ಸರ್ಕಾರವು ಮೆಗಾ ಕೈಮಗ್ಗ ಕ್ಲಸ್ಟರ್ ಸ್ಥಾಪಿಸಲಿದೆ’ ಎಂದು ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ.
ಇಂಫಾಲದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಯೂಷ್, ‘ದೇಶವೇ ಹೆಮ್ಮೆಪಡುವಂತೆ ಮಾಡಿದ ಮೀರಾಬಾಯಿ ಅವರ ಸಾಧನೆಗಾಗಿ ನಾಂಗ್‌ಪೋಕ್ ಕಾಕ್ಚಿಂಗ್‌ನಲ್ಲಿ ₹ 30 ಕೋಟಿ ವೆಚ್ಚದಲ್ಲಿ ಮೆಗಾ ಕೈಮಗ್ಗ ಕ್ಲಸ್ಟರ್ ಸ್ಥಾಪಿಸಲಾಗುವುದು. ಅಂತೆಯೇ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸಿದ ಭಾರತೀಯ ಸೇನೆಯ ಯೋಧರ ಗೌರವಾರ್ಥ ಮೊಯಿರಾಂಗ್‌ ಅನ್ನು ಕೈಮಗ್ಗ ಗ್ರಾಮವನ್ನಾಗಿ ಮಾಡಲಾಗುವುದು’ ಎಂದು ಘೋಷಿಸಿದರು.
‘ಮಣಿಪುರದ ಕೈಮಗ್ಗ ಮತ್ತು ಕರಕುಶಲ ಸಾಮರ್ಥ್ಯವನ್ನು ದೇಶವು ಮತ್ತಷ್ಟು ಮುಂಚೂಣಿಗೆ ತರಬೇಕಿದೆ. ಅಗತ್ಯವಿದ್ದಲ್ಲಿ ಕರಕುಶಲ ಸಚಿವಾಲಯವು, ಕೌಶಲ ಅಭಿವೃದ್ಧಿ, ಮೌಲ್ಯವರ್ಧನೆ, ಪ್ಯಾಕೇಜಿಂಗ್, ವಿನ್ಯಾಸ ಮತ್ತು ಬ್ರ್ಯಾಡಿಂಗ್‌ನಲ್ಲಿ ಸಾಧ್ಯವಿರುವ ಎಲ್ಲ ಸಹಾಯ ನೀಡಲಿದೆ’ ಎಂದರು.
‘ರಾಜ್ಯದ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳು ಅನನ್ಯವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ’ ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದರು.
ಮಣಿಪುರದ ಜವಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ತೊಂಗಮ್ ಬಿಸ್ವಜಿತ್ ಸಿಂಗ್ ಮಾತನಾಡಿ, ‘ಮಣಿಪುರವು ದೇಶದಲ್ಲೇ ಅತಿ ಹೆಚ್ಚು ಮಗ್ಗಗಳನ್ನು ಹೊಂದಿದೆ. ಇಲ್ಲಿ ಸುಮಾರು 2.11 ಲಕ್ಷ ಮಗ್ಗಗಳು ಮತ್ತು 2.12 ಲಕ್ಷ ನೇಕಾರರಿದ್ದಾರೆ. ಇತರ ರಾಜ್ಯಗಳಲ್ಲಿ ನೇಕಾರರ ಸಂಖ್ಯೆಯು ಇಳಿಕೆಯಾಗುತ್ತಿರುವಾಗ, ರಾಜ್ಯದಲ್ಲಿ ಅವರ ಜನಸಂಖ್ಯೆಯು ಹೆಚ್ಚಾಗುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಪಿಯೂಷ್ ಗೋಯಲ್ ಅವರು ‘ಸೈಖೋಮ್ ಮೀರಾಬಾಯಿ ಚಾನೂ’ ಕಿರುಚಿತ್ರವನ್ನು ಬಿಡುಗಡೆ ಮಾಡಿದರು. ಕಿರುಚಿತ್ರಕ್ಕಾಗಿ ಮೀರಾ ಅವರ ತಾಯಿಗೆ ₹ 20 ಲಕ್ಷ ಮೊತ್ತದ ಚೆಕ್ ಅನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.