ADVERTISEMENT

ಭವಿಷ್ಯಕ್ಕಾಗಿ ವಿದ್ಯಾರ್ಥಿಗಳ ಸಜ್ಜಾಗಿಸಲು ‘ಪಿಎಂ ಶ್ರೀ ಸ್ಕೂಲ್’ ಸ್ಥಾಪನೆ ಚಿಂತನೆ

ಪಿಟಿಐ
Published 2 ಜೂನ್ 2022, 11:23 IST
Last Updated 2 ಜೂನ್ 2022, 11:23 IST
ಧರ್ಮೇಂದ್ರ ಪ್ರಧಾನ್‌
ಧರ್ಮೇಂದ್ರ ಪ್ರಧಾನ್‌   

ನವದೆಹಲಿ (ಪಿಟಿಐ): ‘ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ‘ಪಿಎಂ ಶ್ರೀ ಸ್ಕೂಲ್‌’ಗಳನ್ನು ಸ್ಥಾಪಿಸುವ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇವು, ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಪ್ರಯೋಗಶಾಲೆಗಳು ಆಗಿರಲಿವೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು.

ಗುಜರಾತ್‌ನಲ್ಲಿ ಶಿಕ್ಷಣ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಭಾರತವು ಜ್ಞಾನ ಆಧರಿತ ಆರ್ಥಿಕತೆಯನ್ನು ಹೊಂದಲು ಶಾಲಾ ಶಿಕ್ಷಣವೇ ಅಡಿಪಾಯ. ಹೀಗಾಗಿ, ಆಧುನಿಕ ಸೌಲಭ್ಯಗಳುಳ್ಳ ‘ಪಿಎಂ ಶ್ರೀ ಸ್ಕೂಲ್‌’ ಸ್ಥಾಪಿಸಲು ಚಿಂತನೆ ನಡೆದಿದೆ’ ಎಂದರು.

‘21ನೇ ಶತಮಾನದ ಜ್ಞಾನ, ಕೌಶಲಗಳನ್ನು ಹೊಸ ಪೀಳಿಗೆಗೆ ನಿರಾಕರಿಸಲಾಗದು.‘ಪಿಎಂ ಶ್ರೀ ಸ್ಕೂಲ್‌’ ಸ್ವರೂಪದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಭವಿಷ್ಯದ ಸೂಚ್ಯಂಕವಾಗಿ ಇರಬೇಕು. ಇದಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಸಲಹೆ ಪಡೆಯಲು ಬಯಸುತ್ತೇನೆ’ ಎಂದರು.

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕೇಂದ್ರ ಉದ್ದೇಶದೊಂದಿಗೆ ಗುಜರಾತ್‌ನಲ್ಲಿ ಎರಡು ದಿನಗಳ ಶಿಕ್ಷಣ ಸಚಿವರ ಸಮ್ಮೇಳನ ನಡೆಯಿತು.

ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣದರೆಗಿನ 5+3+3+4 ಹಂತದ ಎನ್ಇಪಿಯು ಶಿಕ್ಷಣ ಕ್ರಮವು ಬಾಲ್ಯ, ಶೈಕ್ಷಣಿಕ ಕಾರ್ಯಕ್ರಮ, ಶಿಕ್ಷಕರ ತರಬೇತಿ, ಪ್ರೌಢಶಿಕ್ಷಣ, ಸಮಗ್ರ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಿದೆ. ಮಾತೃಭಾಷೆಯಲ್ಲಿಯೇ ಕಲಿಕೆಗೆ ಒತ್ತು ನೀಡಲಿದೆ ಎಂದು ಹೇಳಿದರು.

ಜ್ಞಾನ ಆಧರಿತ ಆರ್ಥಿಕತೆ ದೃಷ್ಟಿಯಿಂದ ಮುಂದಿನ 25 ವರ್ಷಗಳು ಭಾರತದ ಪಾಲಿಗೆ ನಿರ್ಣಾಯಕವಾಗಿವೆ. ಈ ಗುರಿ ಸಾಧನೆಗಾಗಿ ನಾವೆಲ್ಲರು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ಪರಸ್ಪರರ ಅನುಭವಗಳಿಗೆ ಜಾಗೃತರಾಗಬೇಕು. ಯಶಸ್ಸು ಕಲಿಕೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಭಾರತವನ್ನು ಹೊಸದೊಂದು ಎತ್ತರಕ್ಕೆ ಒಯ್ಯಲಿದೆ ಎಂದು ಸಚಿವರು ಆಶಿಸಿದರು.

ರಾಷ್ಟ್ರೀಯ ಪಠ್ಯಕ್ರಮ ರೂಪಿಸಲು ಹಾಗೂ ಗುಣಮಟ್ಟದ ಇ–ಅಡಕಗಳನ್ನು ರೂಪಿಸಲು ಎಲ್ಲ ಭಾಗಿದಾರರು ಸಕ್ರಿಯವಾಗಿ ಭಾಗವಹಿಸುವಂತೆ ಎಲ್ಲ ಶಿಕ್ಷಣ ಸಚಿವರು ಉತ್ತೇಜನ ನೀಡಬೇಕು. ಈ ಮೂಲಕ ಡಿಜಿಟಲ್ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.