ADVERTISEMENT

ಮನೆ ಮನೆಗೆ ಲಸಿಕೆ: ಎರಡು ತಿಂಗಳ ಅಭಿಯಾನಕ್ಕೆ ಕೇಂದ್ರದ ಸಲಹೆ

ಕಲ್ಯಾಣ್‌ ರೇ
Published 21 ಮೇ 2022, 7:24 IST
Last Updated 21 ಮೇ 2022, 7:24 IST
   

ನವದೆಹಲಿ: ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮನೆ-ಮನೆಗೆ ಲಸಿಕೆ ತಲುಪಿಸುವ ಅಭಿಯಾನವನ್ನು ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ರಾಜ್ಯಗಳಿಗೆ ಸೂಚಿಸಿದೆ. ಈ ಅಭಿಯಾನದಲ್ಲಿ ಅರ್ಹ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್‌ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದೂ ಅದು ಹೇಳಿದೆ.

ರಾಜ್ಯಗಳ ಆರೋಗ್ಯ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಹೊಸ ಕಾರ್ಯಕ್ರಮವು ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಮಟ್ಟದ ಯೋಜನೆಗಳನ್ನು ಹೊಂದಿದ್ದು, ಅರ್ಹ ಗುಂಪುಗಳಿಗೆ ಮೊದಲ, ಎರಡನೇ ಮತ್ತು ಮುನ್ನೆಚ್ಚರಿಕೆ ಡೋಸ್‌ ಲಸಿಕೆ ನೀಡುವ ಗುರಿ ಹೊಂದಿದೆ. ಆದರೂ, ಅಭಿಯಾನದ ಪ್ರಧಾನ ಆದ್ಯತೆಯು 60ಕ್ಕೂ ಹೆಚ್ಚು ವಯಸ್ಸಿನ ಜನರಿಗೆ ಬೂಸ್ಟರ್ ಡೋಸ್ ನೀಡುವುದಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಈವರೆಗೆ 11.84 ಕೋಟಿಗೂ ಹೆಚ್ಚು ಹಿರಿಯ ನಾಗರಿಕರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ಇದರಲ್ಲಿ 4.14 ಕೋಟಿ ಜನರು ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿದ್ದು, ಇದರಲ್ಲಿ ಕೇವಲ 1.69 ಕೋಟಿ ಮಾತ್ರ ಬೂಸ್ಟರ್ ಲಸಿಕೆ ಪಡೆದಿದ್ದಾರೆ.

ADVERTISEMENT

ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಹಿರಿಯ ನಾಗರಿಕರಲ್ಲಿ ಮುನ್ನೆಚ್ಚರಿಕೆ ಡೋಸ್‌ನ ರಾಷ್ಟ್ರೀಯ ಸರಾಸರಿಯ ಪ್ರಮಾಣ ಶೇಕಡ 41ರಷ್ಟಿದೆ, ಆದರೂ 26 ರಾಜ್ಯಗಳಲ್ಲಿ ಸರಾಸರಿಗಿಂತ ಕಡಿಮೆ ಇದೆ. ಕೇರಳ (ಶೇ 40), ಉತ್ತರ ಪ್ರದೇಶ (ಶೇ 38), ಬಿಹಾರ (ಶೇ 38), ತಮಿಳುನಾಡು (ಶೇ 37), ತೆಲಂಗಾಣ (ಶೇ 36), ಮಹಾರಾಷ್ಟ್ರ (ಶೇ 33) ಹಾಗೂ ದೇಶದಲ್ಲೇ ಅತ್ಯಂತ ಕಡಿಮೆ ನಾಗಾಲ್ಯಾಂಡ್‌ನಲ್ಲಿ ಶೇ.12ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.