ADVERTISEMENT

ಜಾರ್ಖಂಡ್‌ | ಹೊಲ ಉಳುಮೆಯಿಂದ ಸಿ.ಎಂ ಗಾದಿವರೆಗೆ... ಚಂಪೈ ಸೊರೇನ್‌ ಪಯಣ

ಪಿಟಿಐ
Published 2 ಫೆಬ್ರುವರಿ 2024, 13:58 IST
Last Updated 2 ಫೆಬ್ರುವರಿ 2024, 13:58 IST
ಚಂಪೈ ಸೊರೇನ್‌
ಚಂಪೈ ಸೊರೇನ್‌   

ರಾಂಚಿ: ಜಾರ್ಖಂಡ್‌ನ ಸೆರೈಕೆಲಾ–ಖಾರ್ಸಾವಾನ್‌ ಜಿಲ್ಲೆಯ ಗ್ರಾಮ ಜಿಲಿಂಗ್‌ಗೋರಾದ ಕೃಷಿ ಕುಟುಂಬದವರಾದ 67 ವರ್ಷದ ಚಂಪೈ ಸೊರೇನ್‌ ಅವರು, 1990ರ ದಶಕದಲ್ಲಿ ಪ್ರತ್ಯೇಕ ರಾಜ್ಯ ರಚನೆಗಾಗಿ ಸುದೀರ್ಘ ಕಾಲ ಹೋರಾಟ ನಡೆಸಿದವರು. ಇದಕ್ಕಾಗಿಯೇ ಅವರನ್ನು ‘ಜಾರ್ಖಂಡನ್‌ ಹುಲಿ’ ಎಂದು ಕರೆಯಲಾಗುತ್ತದೆ.

ಪ್ರತ್ಯೇಕ ರಾಜ್ಯ ಹೋರಾಟದ ಫಲವಾಗಿ 2000ನೇ ಇಸವಿಯಲ್ಲಿ ಬಿಹಾರ ವಿಭಜನೆಯಾಗಿ ಜಾರ್ಖಂಡ್‌ ರಾಜ್ಯ ರಚನೆಯಾಯಿತು. ಜಾರ್ಖಂಡ್‌ ಮುಕ್ತಿ ಮೋರ್ಚಾದ ಅಧ್ಯಕ್ಷ ಶಿಬು ಸೊರೇನ್‌ ಅವರ ನಿಷ್ಠರಾದ ಚಂಪೈ ಅವರು ಶಿಬು ಸೊರೇನ್‌ ಮತ್ತು ಅವರ ಮಗ ಹೇಮಂತ್‌ ಸೊರೇನ್‌ ನಂತರ ಆ ಸ್ಥಾನಕ್ಕೇರಿದ ಜೆಎಂಎಂನ ಮೂರನೇಯವರು.

‘ನನ್ನ ತಂದೆಯೊಂದಿಗೆ (ಸಿಮಲ್‌ ಸೊರೇನ್‌) ಹಿಂದೆ ಹೊಲದಲ್ಲಿ ಉಳುಮೆ ಮಾಡುತ್ತಿದ್ದೆ. ಈಗ ಅದೃಷ್ಟವು ನನಗೆ ವಿಭಿನ್ನ ಪಾತ್ರ ನೀಡಿದೆ’ ಎಂದು ಚಂಪೈ ಅವರು ಜೆಎಂಎಂ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ್ದರು. 

ADVERTISEMENT

ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿರುವ ಚಂಪೈ ಅವರು, 1991ರಲ್ಲಿ ಅವಿಭಜಿತ ಬಿಹಾರದ ಸರೈಕೆಲಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು.

ನಾಲ್ಕು ವರ್ಷಗಳ ಬಳಿಕ ಅವರು ಜೆಎಂಎಂ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಬಿಜೆಪಿಯ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದರು. 2000ದಲ್ಲಿ ನಡೆದ ಚುನಾವಣೆಯಲ್ಲಿ ಅವರು ಬಿಜೆಪಿ ವಿರುದ್ಧ ಸೋತಿದ್ದರು. ಬಳಿಕ 2005ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರು.

ನಂತರ ಅವರು 2009, 2014 ಮತ್ತು 2019ರಲ್ಲಿ ಸತತ ಗೆಲುವು ದಾಖಲಿಸಿದರು. ಅವರು 2010ರ ಸೆಪ್ಟೆಂಬರ್‌ನಿಂದ 2013ರ ಜನವರಿವರೆಗೆ ಅರ್ಜುನ್‌ ಮುಂಡಾ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿದ್ದರು.

2019ರಲ್ಲಿ ಹೇಮಂತ್‌ ಸೊರೇನ್‌ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಚಂಪೈ ಅವರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಸಾರಿಗೆ ಸಚಿವರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ವಿವಾಹವಾದ ಅವರಿಗೆ ನಾಲ್ಕು ಗಂಡು ಮತ್ತು ಮೂವರು ಹೆಣ್ಣುಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.