ಡಿ.ವೈ.ಚಂದ್ರಚೂಡ್
ನವದೆಹಲಿ: ಇಲ್ಲಿನ ಕೃಷ್ಣ ಮೆನನ್ ಮಾರ್ಗದ ಅಧಿಕೃತ ಬಂಗಲೆಯನ್ನು ಶೀಘ್ರದಲ್ಲೇ ತೆರವುಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸೋಮವಾರ ಹೇಳಿದ್ದಾರೆ.
ನಿಗದಿತ ಅವಧಿ ಮುಗಿದರೂ ಚಂದ್ರಚೂಡ್ ಅವರು ಬಂಗಲೆಯನ್ನು ತೆರವುಗೊಳಿಸದೇ ಇದ್ದುದು ವಿವಾದಕ್ಕೆ ಕಾರಣವಾಗಿತ್ತು. ಬಂಗಲೆ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಅವರ ಹೇಳಿಕೆ ಹೊರಬಿದ್ದಿದೆ.
ಚಂದ್ರಚೂಡ್ ಅವರು ಪತ್ನಿ ಕಲ್ಪನಾ ಹಾಗೂ ಪುತ್ರಿಯರಾದ ಪ್ರಿಯಾಂಕಾ ಹಾಗೂ ಮಾಹಿ ಅವರ ಜೊತೆ ಸಿಜೆಐಗೆ ಮೀಸಲಿಟ್ಟ ಕೃಷ್ಣ ಮೆನನ್ ಮಾರ್ಗದ ಬಂಗಲೆ ಸಂಖ್ಯೆ 5ರಲ್ಲಿ ವಾಸಿಸುತ್ತಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪತ್ರ ಬರೆದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಚೂಡ್, ‘ಮನೆ ತೆರವು ಮಾಡಲು ನಾವು ಸಾಮಾನು ಸರಂಜಾಮುಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದೇವೆ. ಕೆಲವು ಸಾಮಾನುಗಳನ್ನು ಈಗಾಗಲೇ ಹೊಸ ಮನೆಗೆ ಸ್ಥಳಾಂತರಿಸಿದ್ದೇವೆ’ ಎಂದು ಹೇಳಿದ್ದಾರೆ.
ಮನೆ ತೆರವು ಮಾಡದೇ ಇರುವುದು ವಿವಾದದ ರೂಪ ಪಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ತಮ್ಮ ಇಬ್ಬರು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವುದು ತೆರವು ಪ್ರಕ್ರಿಯೆ ತಡವಾಗಲು ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಳಿಗೆ ಗಾಲಿಕುರ್ಚಿಯಲ್ಲಿ ಓಡಾಟ ನಡೆಸಲು ಅನುಕೂಲ ಹೊಂದಿರುವ ಮನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ 2022ರ ನವೆಂಬರ್‌ನಿಂದ 2024ರ ನವೆಂಬರ್‌ವರೆಗೆ ಕೆಲಸ ಮಾಡಿದ್ದಾರೆ. ನಿವೃತ್ತಿ ಪಡೆದು ಎಂಟು ತಿಂಗಳು ಕಳೆದರೂ ಸಿಜೆಐ ಅಧಿಕೃತ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
‘ಮಕ್ಕಳಿಗೆ ವಿಶೇಷ ಕಾಳಜಿ ಬೇಕಿದೆ’
‘ನನ್ನ ಇಬ್ಬರು ಮಕ್ಕಳು– ಪ್ರಿಯಾಂಕಾ ಮತ್ತು ಮಾಹಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಅವರು ನೆಮಾಲಿನ್ ಮಯೋಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸ್ನಾಯುಗಳ ಮೇಲೆ ಪರಿಣಾಮ ಬೀರುವ ಅಪರೂಪದ ಆನುವಂಶಿಕ ಕಾಯಿಲೆ ಇದಾಗಿದೆ’ ಎಂದು ಚಂದ್ರಚೂಡ್ ಹೇಳಿದ್ದಾರೆ. ‘ಮನೆಯಲ್ಲಿ ನಾವು ಉತ್ತಮ ಗುಣಮಟ್ಟದ ನೈರ್ಮಲ್ಯ ಕಾಪಾಡಿಕೊಳ್ಳುತ್ತೇವೆ. ಇಬ್ಬರು ಮಕ್ಕಳ ಆರೈಕೆ ಮಾಡಲು ದಾದಿ ಇದ್ದಾರೆ. ಮನೆ ತೆರವು ಮಾಡಲು ಕೆಲವು ದಿನ ತಡವಾಗಿದೆ. ಹೊಸ ಮನೆಯಲ್ಲಿ ಮಕ್ಕಳಿಗೆ ಎಲ್ಲ ಸೌಲಭ್ಯಗಳು ಸಿದ್ಧವಾಗಿದೆ ಎಂದು ಹೇಳಿದ ಕೂಡಲೇ ಈ ಬಂಗಲೆ ತೆರವು ಮಾಡುತ್ತೇವೆ’ ಎಂದಿದ್ದಾರೆ. ಹಿರಿಯ ಮಗಳು ಪ್ರಿಯಾಂಕಾ ಅವರು 2022ರಲ್ಲಿ ಚಂಡೀಗಢದ ಆಸ್ಪತ್ರೆಯಲ್ಲಿ 44 ದಿನ ಐಸಿಯುನಲ್ಲಿ ಇದ್ದದ್ದನ್ನು ಅವರು ಇದೇ ವೇಳೆ ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.