ADVERTISEMENT

Chandrayaan-3: ಚಂದ್ರನ ಅಂಗಳದ ಚಿತ್ರಗಳ ಕಳುಹಿಸಿದ ವಿಕ್ರಮ್ ಲ್ಯಾಂಡರ್‌

ಪಿಟಿಐ
Published 21 ಆಗಸ್ಟ್ 2023, 6:24 IST
Last Updated 21 ಆಗಸ್ಟ್ 2023, 6:24 IST
   

ಬೆಂಗಳೂರು: ಚಂದ್ರನ ಸನಿಹಕ್ಕೆ ತಲುಪಿರುವ ಚಂದ್ರಯಾನ–3ರ ಲ್ಯಾಂಡರ್‌ಗೆ ಅಳವಡಿಸಿರುವ ‘ಅಪಾಯವನ್ನು ಗುರುತಿಸುವ ಹಾಗೂ ತಪ್ಪಿಸುವ‘ (ಎಲ್‌ಎಚ್‌ಡಿಎಸಿ) ತಂತ್ರಜ್ಞಾನದ ಕ್ಯಾಮೆರಾ ಸೆರೆ ಹಿಡಿದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ತನ್ನ ಮೈಕ್ರೊಬ್ಲಾಗಿಂಗ್‌ ತಾಣ ‘ಎಕ್ಸ್‌’ (ಟ್ವಿಟರ್‌) ನಲ್ಲಿ ಹಂಚಿಕೊಂಡಿದೆ.

ಲ್ಯಾಂಡರ್‌ ಇಳಿಯಲು ಆ. 23ರ ಸಂಜೆ 6:04 ಕ್ಕೆ ಸಮಯ ನಿಗದಿಪಡಿಸಲಾಗಿದೆ. ಅದಕ್ಕಾಗಿ ಸುರಕ್ಷಿತ ಲ್ಯಾಂಡಿಂಗ್‌ಗೆ ಸೂಕ್ತ ಜಾಗವನ್ನು ಹುಡುಕುವ ನಿಟ್ಟಿನಲ್ಲಿ ಲ್ಯಾಂಡರ್‌ ಹಲವು ಚಿತ್ರಗಳನ್ನು ರವಾನಿಸಿದೆ.

ದೊಡ್ಡ ಆಘಾತದಿಂದಾಗಿ ಚಂದ್ರನ ಮೇಲೆ ರೂಪಗೊಂಡಿರುವ ಹೇನ್, ಬಾಸ್–ಎಲ್ ಮತ್ತು ಬೆಲ್ಕೊವಿಚ್, ಮತ್ತು ಹಂಬೋಲ್ಟಿಯಾನಮ್ ಹಾಗೂ ಚಂದ್ರನ ಮಾರಿಯಾ ಅಥವಾ ಬಸಾಲ್ಟಿಕ್ ಬಯಲುಗಳನ್ನು ಚಿತ್ರಗಳಲ್ಲಿ ಕಣಬಹುದಾಗಿದೆ.

ADVERTISEMENT

ತಗ್ಗು, ದಿಣ್ಣೆಗಳು ಹೆಚ್ಚು ಇರದ ಹಾಗೂ ಅತಿಯಾದ ಕುಳಿ ಇರದ ಪ್ರದೇಶದ ಹುಡುಕಾಟದಲ್ಲಿ ಇಸ್ರೊ ವಿಜ್ಞಾನಿಗಳು ಇದ್ದಾರೆ. ಲ್ಯಾಂಡರ್ ಇಳಿಯುವ ಪ್ರಕ್ರಿಯೆಯನ್ನು ಅಹಮದಾಬಾದ್‌ನಲ್ಲಿರುವ ಸ್ಪೇಸ್‌ ಅಪ್ಲಿಕೇಷನ್ ಸೆಂಟರ್ ಅಭಿವೃದ್ಧಿಪಡಿಸಿದೆ. 

ಚಂದ್ರಯಾನ–3ರಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಲ್ಯಾಂಡರ್‌ನಲ್ಲಿರುವ ಎಲ್‌ಎಚ್‌ಡಿಎಸಿ ಕೂಡಾ ಒಂದು. ಚಂದ್ರಯಾನ–2ರಲ್ಲಿ ಲ್ಯಾಂಡಿಂಗ್ ಹಂತದಲ್ಲಾದ ಸಮಸ್ಯೆಯನ್ನು ಚಂದ್ರಯಾನ–3ರಲ್ಲಿ ಎಲ್ಲಾ ರೀತಿಯಿಂದಲೂ ಈ ಬಾರಿ ಪರೀಕ್ಷಿಸಲಾಗಿದೆ. ಸುರಕ್ಷಿತ ಲ್ಯಾಂಡಿಂಗ್ ಮತ್ತು ಚಂದ್ರನ ಅಳಗಳದ ಮೇಲೆ ರೋವರ್‌ ಚಲನೆಯ ಪರಿಶೀಲನೆಯನ್ನೂ ಮಾಡಿಕೊಳ್ಳಲಾಗಿದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.