ADVERTISEMENT

ಚೆನ್ನೈ ಮಳೆ: ಗಾಳಿಯ ರಭಸ ಹೆಚ್ಚಳ, ವಿಮಾನ ಇಳಿಯಲು ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2021, 10:44 IST
Last Updated 11 ನವೆಂಬರ್ 2021, 10:44 IST
ಚೆನ್ನೈನಲ್ಲಿ ಅಬ್ಬರಿಸುತ್ತಿರುವ ಸಮುದ್ರ
ಚೆನ್ನೈನಲ್ಲಿ ಅಬ್ಬರಿಸುತ್ತಿರುವ ಸಮುದ್ರ   

ಚೆನ್ನೈ: ತಮಿಳುನಾಡಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕನಿಷ್ಠ 14 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಮಳೆ ಬಿರುಸುಗೊಂಡಿದ್ದು, ಗಾಳಿಯ ರಭಸವೂ ಹೆಚ್ಚಿರುವುದರಿಂದ ವಿಮಾನಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುವುದನ್ನು ಸಂಜೆಯವರೆಗೂ ನಿರ್ಬಂಧಿಸಲಾಗಿದೆ.

'ಬಿರುಸಾದ ಗಾಳಿ ಮತ್ತು ಭಾರಿ ಮಳೆ ಸುರಿಯುತ್ತಿರುವ ಕಾರಣ, ಚೆನ್ನೈ ವಿಮಾನ ನಿಲ್ದಾಣಕ್ಕೆ ವಿಮಾನಗಳು ಇಳಿಯುವುದನ್ನು ಇಂದು ಸಂಜೆ 6ರವರೆಗೂ ನಿರ್ಬಂಧಿಸಲಾಗಿದೆ. ಚೆನ್ನೈನಿಂದ ವಿಮಾನಗಳು ಹಾರಾಟ ಆರಂಭಿಸುವುದನ್ನು ನಿರ್ಬಂಧಿಸಿಲ್ಲ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಚೆನ್ನೈ ವಿಮಾನ ನಿಲ್ದಾಣದ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ.

'ವಿಮಾನಗಳ ಹಾರಾಟದ ಕುರಿತು ಪ್ರಯಾಣಿಕರು ನಿಗದಿತ ಏರ್‌ಲೈನ್ಸ್‌ ಸಂಪರ್ಕಿಸಲು ಕೋರುತ್ತೇವೆ' ಎಂದು ವಿಮಾನ ನಿಲ್ದಾಣ ಟ್ವೀಟಿಸಿದೆ.

ಚೆನ್ನೈನಲ್ಲಿ ಸುಮಾರು 100ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ, ಹಲವು ಕಡೆ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. 13 ಸಬ್‌ವೇಗಳಿಗೆ ನೀರು ನುಗ್ಗಿವೆ. ಮರೀನಾ ಬೀಚ್‌ನಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಹಲವು ಜಲಾಶಯಗಳು ಗರಿಷ್ಠ ಮಟ್ಟ ತಲುಪಿದ್ದು, ನೀರು ಹೊರ ಹರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಳಿಗಾಗಿ 150ಕ್ಕೂ ಹೆಚ್ಚು ಸಿಬ್ಬಂದಿ ಚೆನ್ನೈ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.