ADVERTISEMENT

ಛತ್ತೀಸ್‌ಗಡ ವಿಧಾನಸಭೆ: ಕಾಂಗ್ರೆಸ್‌ ಪಾಳಯದಲ್ಲಿ ಸಂಭ್ರಮ; ಮೌನಕ್ಕೆ ಜಾರಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 9:51 IST
Last Updated 11 ಡಿಸೆಂಬರ್ 2018, 9:51 IST
   

ಛತ್ತೀಸ್‌ಗಡದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿ ಹಿಂದಕ್ಕೆ ಸರಿದಿದೆ. ಮಂಗಳವಾರ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್‌ 59 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೂರು ಅವಧಿಗೆ ಮುಖ್ಯಮಂತ್ರಿಯಾದ ಬಿಜೆಪಿಯ ರಮಣ್‌ ಸಿಂಗ್‌ ಸ್ವಕ್ಷೇತ್ರದಲ್ಲಿ ಬಹುಸಮಯದವರೆಗೂ ಹಿನ್ನಡೆ ಅನುಭವಿಸಿದ್ದು, ಅವರ ನಿವಾಸದೆದುರು ನೀರವ ಮೌನ ಆವರಿಸಿದೆ.

ರಾಜನಾಂದಗಾಂವ್‌ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ, ಕಾಂಗ್ರೆಸ್‌ ಅಭ್ಯರ್ಥಿ ಕರುಣಾ ಶುಕ್ಲ ಅವರು ಸಿಎಂ ರಮಣ್‌ ಸಿಂಗ್‌ಗೆ ತೀವ್ರ ಪೈಪೋಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ತೀವ್ರ ಪೈಪೋಟಿಯಿಂದಬಿಜೆಪಿ ಹಿನ್ನಡೆ ಅನುಭವಿಸಿದೆ. 90 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 66ಸ್ಥಾನಗಳಲ್ಲಿ ಮುಂದಿದ್ದು, ಬಿಜೆಪಿ 18ಸ್ಥಾನಗಳಲ್ಲಷ್ಟೇ ಪ್ರಾಬಲ್ಯ ಕಾಯ್ದುಕೊಂಡಿದೆ.

ಸಿಎಂ ರಮಣ್‌ ಸಿಂಗ್‌

ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರೆನಿಸಿರುವ ಟಿ.ಎಸ್‌.ಸಿಂಗ್‌ ಡಿಯೊ ಅವರು ಅಂಬಿಕಾಪುರ್‌ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಛತ್ತೀಸ್‌ಗಡ ರಾಜ್ಯದ ಮೊದಲ ಮುಖ್ಯಮಂತ್ರಿ, ಜನತಾ ಕಾಂಗ್ರೆಸ್‌ನ ಅಜಿತ್‌ ಜೋಗಿ ಮಹವಾಹಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅವರ ಪತ್ನಿ ರೇಣು ಜೋಗಿ ಕೋಟಾದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ADVERTISEMENT

ಮುಖ್ಯಮಂತ್ರಿ, ಬಿಜೆಪಿಯ ರಮಣ್‌ ಸಿಂಗ್‌ ಅವರ ರಾಯ್‌ಪುರ ನಿವಾಸದಲ್ಲಿ ಯಾವುದೇ ಚಟುವಟಿಕೆಗಳು ಕಂಡು ಬಂದಿಲ್ಲ. ಬಿಜೆಪಿ ಪ್ರಧಾನ ಕಚೇರಿ ಏಕತಂ ಪರಿಷತ್‌ನಲ್ಲಿ ಖಾಲಿತನ ಆವರಿಸಿದ್ದು, ಟಿವಿ ಮಾಧ್ಯಮಗಳ ವರದಿಗಾರರು ಕಚೇರಿಯ ಮುಂದೆ ನಿಂತಿರುವುದಷ್ಟೇ ಕಾಣಬಹುದಾಗಿದೆ. ಬಿಜೆಪಿಯ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಪಕ್ಷದ ಕಚೇರಿಯಲ್ಲಿ ಟಿವಿ ಮುಂದೆ ಫಲಿತಾಂಶ ಸುದ್ದಿಗಳನ್ನು ವೀಕ್ಷಿಸುತ್ತ ಕುಳಿತಿದ್ದಾರೆ. ಘೋಷಣೆಗಳು, ಜೈಕಾರಗಳಿಲ್ಲದೆ ಮೌನ ಸಂಭಾಷಣೆ ನಡೆಯುತ್ತಿದೆ. ಪೂರ್ಣ ಫಲಿತಾಂಶಕ್ಕೆ ಇನ್ನೂ ಸಮಯವಿದೆ ಎಂದು ಸದಸ್ಯ ಸಾಂತ್ವನ ಮಾಡಿಕೊಳ್ಳುತ್ತಿರುವುದು ಸಹಜವಾಗಿದೆ.

ರಮಣ್‌ ಸಿಂಗ್‌ ಅತಿ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿರುವ ಬಿಜೆಪಿ ಅಭ್ಯರ್ಥಿ. 2013ರಲ್ಲಿ ಅವರು 36 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ಗೆ ಮಾಯಾವತಿ ನೇತೃತ್ವದ ಬಿಎಸ್‌ಪಿ ಬೆಂಬಲ ನೀಡಿರುವುದು ಕಾಂಗ್ರೆಸ್‌ ಮತಗಳಿಕೆ ಹೊಡೆತ ನೀಡಿದಂತಾಗಿದೆ.

2013ರಲ್ಲಿ ಬಿಜೆಪಿ 49, ಕಾಂಗ್ರೆಸ್‌ 39, ಬಿಎಸ್‌ಪಿ ಹಾಗೂ ಪಕ್ಷೇತರರು ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಹದಿನೈದು ವರ್ಷಗಳ ನಂತರ ಕಾಂಗ್ರೆಸ್‌ ಮತ್ತೆ ಅಧಿಕಾರ ಸ್ಥಾಪಿಸುವ ಆಕಾಂಕ್ಷೆ ಹೊಂದಿದ್ದು, ಈವರೆಗಿನ ಫಲಿತಾಂಶ ಸಹ ಅದಕ್ಕೆ ಪುಷ್ಠಿ ನೀಡಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.