ಬಿಜಾಪುರ: ನಕ್ಸಲರು ಇರಿಸಿದ ಕಚ್ಚಾ ಬಾಂಬ್ (ಐಇಡಿ) ಸ್ಫೋಟಗೊಂಡು 16 ವರ್ಷದ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕೊಂಡಪಡ್ಗು ಗ್ರಾಮದ ನಿವಾಸಿಯಾಗಿರುವ ಬಾಲಕ, ಜಾನುವಾರುಗಳನ್ನು ಮೇಯಿಸಲು ಸಂಜೆ ಹತ್ತಿರದ ಅರಣ್ಯ ಪ್ರದೇಶಕ್ಕೆ ತೆರಳಿದಾಗ, ಅಲ್ಲಿದ್ದ ಬಾಂಬ್ ಸ್ಫೋಟಗೊಂಡಿದೆ. ಆತನ ಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುವ ಭದ್ರತಾ ಸಿಬ್ಬಂದಿ ಇದೇ ಮಾರ್ಗವಾಗಿ ಹೋಗುತ್ತಾರೆ. ಹೀಗಾಗಿ ಅವರನ್ನು ಗುರಿಯಾಗಿಸಿ ನಕ್ಸಲರು ಕಚ್ಚಾ ಬಾಂಬ್ ಇರಿಸುತ್ತಾರೆ ಎಂದು ಪೊಲೀಸರು ತಿಳಿಸಿದರು.
ಹೆಚ್ಚು ಜಾಗರೂಕರಾಗಿರುವಂತೆ ಪೊಲೀಸರು ಸ್ಥಳೀಯ ಜನರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಜುಲೈ 13ರಂದು ನಡೆದ ಇಂಥದ್ದೇ ಘಟನೆಯೊಂದರಲ್ಲಿ ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿದ್ದರು.
ರಾಜ್ಯದ 7 ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತರ್ ಪ್ರದೇಶದಲ್ಲಿ, ನಕ್ಸಲರು ಇರಿಸಿದ್ದ ಕಚ್ಚಾ ಬಾಂಬ್‌ಗಳಿಂದಾಗಿ ಈ ವರ್ಷ ಒಟ್ಟು 25 ಜನರು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.