ನವದೆಹಲಿ: ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕುರಿತು ಸಂಸತ್‌ನಲ್ಲಿ ಇಂದು ಕಾವೇರಿದ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಅವರ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ.
‘ದಿ ಕ್ವಿಂಟ್’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಚಿದಂಬರಂ, ‘ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದರು ಎಂದು ಹೇಗೆ ಅಂದುಕೊಳ್ಳುತ್ತೀರಿ. ಅವರು ಈ ನೆಲದ ಭಯೋತ್ಪಾದಕರೇ ಆಗಿರಬಹುದು. ಏಕೆಂದರೆ ಇಂದಿನವರೆಗೂ ಕೃತ್ಯ ನಡೆಸಿದವರ ಯಾವ ಸುಳಿವೂ ಪತ್ತೆಯಾಗಿಲ್ಲ’ ಎಂದಿದ್ದಾರೆ.
‘ಭಯೋತ್ಪಾದಕರನ್ನು ಗುರುತಿಸಿದ್ದಾರಾ? ಅವರು ಎಲ್ಲಿಂದ ಬಂದರು? ಅವರು ಈ ನೆಲದ ಭಯೋತ್ಪಾದಕರೇ ಆಗಿರುವ ಸಾಧ್ಯತೆಗಳಿವೆ. ಹೀಗಾಗಿ ಅವರು ಪಾಕಿಸ್ತಾನದಿಂದಲೇ ಬಂದರು ಎಂದು ಹೇಗೆ ಭಾವಿಸುತ್ತೀರಿ? ಅದಕ್ಕೆ ಸಾಕ್ಷಿಗಳೇ ಇಲ್ಲ’ ಎಂದಿದ್ದಾರೆ.
‘ಈ ವಿಷಯದಲ್ಲಿ ಕೇಂದ್ರದ ಮೌನವೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘ಆಪರೇಷನ್ ಸಿಂಧೂರ’ ಕುರಿತು ಪ್ರಧಾನಿ ಏಕೆ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಹಲವಾರು ರ‍್ಯಾಲಿಗಳಲ್ಲಿ ಮಾತನಾಡುತ್ತಾರೆ. ಆದರೆ ಪ್ರಜಾಪ್ರಭುತ್ವದ ಗುಡಿಯಾದ ಸಂಸತ್ತಿನಲ್ಲಿ ಈ ಕುರಿತು ಚರ್ಚೆಗೆ ಅವರೇಕೆ ಸಿದ್ಧರಿಲ್ಲ’ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಚಿದಂಬರಂ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಕಾಂಗ್ರೆಸ್ ಉತ್ಸುಕವಾಗಿದೆ’ ಎಂದಿದ್ದಾರೆ.
‘ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಯಾವಾಗೆಲ್ಲಾ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದೆಯೋ ಆಗೆಲ್ಲಾ, ಕಾಂಗ್ರೆಸ್ ಮುಖಂಡರು ಇಸ್ಲಾಮಾಬಾದ್ ಪರ ವಕೀಲರಂತೆ ಭಾರತವನ್ನು ಟೀಕಿಸುತ್ತಾರೆ’ ಎಂದಿದ್ದಾರೆ.
ಈ ಟೀಕೆಗಳಿಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಚಿದಂಬರಂ, ‘ನನ್ನ ಸಂದರ್ಶನ ಪೂರ್ಣಪಾಠವನ್ನು ನೋಡದೆ ಹೇಳಿಕೆಯೊಂದನ್ನಿಟ್ಟುಕೊಂಡು ಟ್ರೋಲ್ ಮಾಡುತ್ತಿರುವುದು ಕೆಟ್ಟ ಪರಂಪರೆ. ಇವರು ತಮ್ಮ ಟೀಕೆಗಳಿಗೆ ಎರಡು ವಾಕ್ಯಗಳನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಕೆಲವನ್ನು ‘ಮ್ಯೂಟ್’ ಮಾಡಿ, ಸ್ಪೀಕರ್‌ಗೆ ಕಪ್ಪು ಬಣ್ಣದ ಪೇಂಟ್ ಮಾಡಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.