ADVERTISEMENT

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ: ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 18:58 IST
Last Updated 28 ಜೂನ್ 2021, 18:58 IST
   

ನವದೆಹಲಿ: ‘ಎಲ್ಲ ಶಾಸಕರಿಗೂ ಒಂದು ದಿನ ಮುಖ್ಯಮಂತ್ರಿ ಆಗಬೇಕೆಂಬ ಅಭಿಲಾಷೆ ಇರುತ್ತದೆ. ಅವರವರ ಬೆಂಬಲಿಗರು ತಮ್ಮ ಆಶಯವನ್ನು ಬಹಿರಂಗವಾಗಿ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ’ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ಪಕ್ಷಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಬಾರದು’ ಎಂದರು.

‘ನದಿಯನ್ನು ದಾಟುವಾಗಲಷ್ಟೇ ನಾವು ಅದರ ಆಳ– ಅಗಲದ ಬಗ್ಗೆ ಆಲೋಚಿಸಬೇಕು. ನದಿ ದಾಟುವ ಸಂದರ್ಭ ಇನ್ನೂ ಬಂದಿಲ್ಲ. ನದಿಯ ದಡದ ಹತ್ತಿರಕ್ಕೂ ಬರದೆ ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ADVERTISEMENT

‘ನಮ್ಮ ಪಕ್ಷದಲ್ಲಿ ಇರುವವರು ನಾಗಪುರ ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ನಟಿಸುವ ಪಾತ್ರಧಾರಿಗಳಲ್ಲ. ಬದಲಿಗೆ, ಹೈಕಮಾಂಡ್‌ ಆದೇಶ ಪಾಲಿಸುವವರು’ ಎಂದು ಅವರು ತಿಳಿಸಿದರು.

‘ಮುಂದಿನ ಮುಖ್ಯಮಂತ್ರಿ ಯಾರಾಗಬೇಕು’ ಎಂಬುದು ಚುನಾವಣೆಯಲ್ಲಿ ಬಹುಮತ ಪಡೆದ ನಂತರ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುವಂಥದ್ದು ಎಂದ ಅವರು, ‘ದೆಹಲಿ ಭೇಟಿ ವೇಳೆ ನಾವು ವರಿಷ್ಠರನ್ನು ಭೇಟಿ ಮಾಡಿ ಈ ವಿಷಯದ ಕುರಿತು ದೂರು ನೀಡುವ ಉದ್ದೇಶ ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ದೂರು ನೀಡುವುದಿಲ್ಲ: ಪಕ್ಷದ ವರಿಷ್ಠರಿಗೆ ಯಾವುದೇ ರೀತಿಯ ದೂರು ಸಲ್ಲಿಸುವುದಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಕೆ.ಎಚ್‌. ಮುನಿಯಪ್ಪ ಹೇಳಿದರು.

‘ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಪಕ್ಷವು ಬಹುಮತ ಗಳಿಸಿದ ನಂತರವಷಷ್ಟೇ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಎದುರಾಗಲಿದೆ. ಅದಕ್ಕೆ ಹೈಕಮಾಂಡ್‌ ಉತ್ತರ ನೀಡುತ್ತದೆ. ಆ ಬಗ್ಗೆ ಈಗಲೇ ಏಕೆ ಆಲೋಚಿಸಬೇಕು’ ಎಂದು ಅವರು ಪ್ರಶ್ನಿಸಿದರು.

ಬಣ ರಾಜಕೀಯ ಕೊನೆಗಾಣಿಸುವಂತೆ ಮನವಿ?
‘ಭಾವಿ ಮುಖ್ಯಮಂತ್ರಿ’ ಹೇಳಿಕೆಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉಂಟಾಗುತ್ತಿರುವ ಮುಜುಗರ ತಪ್ಪಿಸುವಂತೆ ಪಕ್ಷದ ‘ತಟಸ್ಥ’ ಗುಂಪಿನ ಕೆಲವು ನಾಯಕರು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ಇಲ್ಲಿ ಪಕ್ಷದ ಮುಖಂಡ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿರುವ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಮಾಜಿ ಶಾಸಕ ಬಿ.ಆರ್‌. ಪಾಟೀಲ ಮತ್ತಿತರರು, ಅನಗತ್ಯ ಹೇಳಿಕೆಗಳಿಂದ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಸೃಷ್ಟಿಯಾಗಿದೆ. ಇಂಥ ಬೆಳವಣಿಗೆಗಳಿಗೆ ಅವಕಾಶ ನೀಡದಂತೆ ನಿಯಂತ್ರಿಸಬೇಕು ಎಂದು ಕೋರಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ವಿಷಯದಲ್ಲಿ ನೀಡುತ್ತಿರುವ ಹೇಳಿಕೆಗಳು ಪಕ್ಷಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿವೆ. ಕೂಡಲೇ ಎರಡೂ ಬಣಗಳ ನಡುವಿನ ತಿಕ್ಕಾಟ ಕೊನೆಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.