ADVERTISEMENT

ಅಪಹರಣವಾದ 24 ಗಂಟೆಯಲ್ಲೇ ಶಿಶು ರಕ್ಷಣೆ: ಗೋವಾ ಪೊಲೀಸರಿಗೆ ಸಿಎಂ ಸಾವಂತ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:04 IST
Last Updated 13 ಜೂನ್ 2021, 3:04 IST
ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌
ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌   

ಪಣಜಿ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅಪಹರಣಕ್ಕೊಳಗಾಗಿದ್ದ ಒಂದೂವರೆ ತಿಂಗಳ ಶಿಶುವನ್ನು ಗೋವಾ ಪೊಲೀಸರು ಕೇವಲ24 ಗಂಟೆಗಳಲ್ಲೇ ರಕ್ಷಿಸಿದ್ದಾರೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಶನಿವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಗು ಅಪಹರಿಸಿದ್ದ ಮಹಿಳೆಯನ್ನು ಉತ್ತರ ಗೋವಾದ ಸಾಲೇಲಿಗ್ರಾಮದಲ್ಲಿಬಂಧಿಸಲಾಗಿದೆ.

ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಮತ್ತು ಅಪಹರಣವಾದ ಕೇವಲ24ಗಂಟೆಗಳಲ್ಲೇಒಂದೂವರೆ ತಿಂಗಳ ಶಿಶುವನ್ನು ರಕ್ಷಿಸಿದ ಗೋವಾ ಪೊಲೀಸರನ್ನು ಅಭಿನಂದಿಸುತ್ತೇನೆ. ನಾಗರಿಕರ ರಕ್ಷಣೆ ಮತ್ತು ಭದ್ರತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಸಾವಂತ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪೊಲೀಸರ ಮಾಹಿತಿ ಪ್ರಕಾರ ಜೂನ್‌ 11 ರಂದು, ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಅಪರಿಚಿತ ಮಹಿಳೆಯೊಬ್ಬರು ಶಿಶು ಅಪಹರಿಸಿದ್ದಾರೆ ಎಂಬ ಮಾಹಿತಿಅಗಾಕೈಮ್ ಪೊಲೀಸ್‌ ಠಾಣೆಗೆಲಭ್ಯವಾಗಿದೆ.

ಶಿಶುವಿನ ತಾಯಿ ಲಲಿತಾ ನಾಯಕ್‌ ಅವರನ್ನು ಭೇಟಿಯಾದ ಅಪರಿಚಿತ ಮಹಿಳೆಯೊಬ್ಬರು, ಮಾತನಾಡಿಸುವ ನೆಪದಲ್ಲಿ ಅವರ (ತಾಯಿಯ) ಗಮನವನ್ನು ಬೇರೆಡೆಗೆ ಸೆಳೆದು ಮಗು ಅಪಹರಿಸಿದ್ದಾರೆ.

ಮಾಹಿತಿ ದೊರೆತತಕ್ಷಣವೇ ಉತ್ತರ ಗೋವಾ ಜಿಲ್ಲೆ ಮತ್ತುಅಪರಾಧ ವಿಭಾಗದ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಸಿಸಿಟಿವಿ ದೃಶ್ಯಗಳಲ್ಲಿಯೂ ಮುಖ ಗುರುತು ಸ್ಪಷ್ಟವಾಗಿಲ್ಲದ ಕಾರಣ ಪ್ರಕರಣ ಬೇಧಿಸುವುದು ಸವಾಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಗಳು ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿ ಬಿಚೋಲಿಮ್‌ ಮತ್ತು ವಲ್ಪೋಯಿ ನಗರ, ಸುತ್ತಮುತ್ತ ಹುಡುಕಾಟ ಆರಂಭಿಸಿದವು.ಬಳಿಕ ಸಾಲೇಲಿ ಗ್ರಾಮವನ್ನು ಸುತ್ತುವರಿದು, ಆಸ್ಪತ್ರೆ ಮತ್ತು ತಾಯಿ ನೀಡಿದ ಹೇಳಿಕೆಗಳಿಗೆ ಹೊಂದಿಕೆಯಾಗುವ ಮಗುವನ್ನು ಪತ್ತೆಹಚ್ಚಲಾಯಿತು.

ಬಂಧನಕ್ಕೊಳಗಾಗಿರುವ ಮಹಿಳೆಯನ್ನು ವಿಶ್ರಾಂತಿ ಗವಾಸ್‌ ಎಂದು ಗುರುತಿಸಲಾಗಿದೆ. ಮಗುವನ್ನು ತಾನೇ ಸಾಕಲು ನಿರ್ಧರಿಸಿದ್ದುದಾಗಿ ಮತ್ತು ಅದಕ್ಕಾಗಿಯೇ ಅಪಹರಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಹೇಳಿಕೆ ನೀಡಿದ್ದಾರೆ. ಪ್ರಕರಣದತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.