ಬಂಧನ
(ಪ್ರಾತಿನಿಧಿಕ ಚಿತ್ರ)
ಮುಂಬೈ: ಎರಡು ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ದಂತ ವೈದ್ಯೆಯೊಬ್ಬರನ್ನು ಕೋಲ್ಕತ್ತದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ವಡಲಾ ಟ್ರಕ್ ಟರ್ಮಿನಸ್ ಪೊಲೀಸ್ ಠಾಣೆಯ ತಂಡ ಆರೋಪಿ ರೇಷ್ಮಾ ಸಂತೋಷ್ ಕುಮಾರ್ ಬ್ಯಾನರ್ಜಿ ಎಂಬವರನ್ನು ಬಂಧಿಸಿದೆ. ಎರಡು ವರ್ಷದ ಗಂಡು ಮಗು ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಕಾರ್ಯಾಚರಣೆ ವೇಳೆ ರಕ್ಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುತ್ತಿಗೆದಾರರೊಬ್ಬರು ಮೇ 2024 ರಲ್ಲಿ ತಮ್ಮ ಅಳಿಯ ಮತ್ತು ಪುಟ್ಟ ಮೊಮ್ಮಗನ ಅಪಹರಣದ ಬಗ್ಗೆ ದೂರು ನೀಡಿದ್ದರು.
ದೂರುದಾರರ ಅಳಿಯ ಮಗುವನ್ನು ಅಸ್ಮಾ ಶೇಖ್, ಷರೀಫ್ ಶೇಖ್ ಮತ್ತು ಆಶಾ ಪವಾರ್ ಅವರಿಗೆ ₹ 1.6 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಪೊಲೀಸರು ನಂತರ ಮಗುವಿನ ತಂದೆ ಮತ್ತು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರು ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಮಹಿಳೆಗೆ ಗಂಡು ಮಗುವನ್ನು ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆ ಭುವನೇಶ್ವರದ ದಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಈ ವರ್ಷ ಏಪ್ರಿಲ್ 5 ರಂದು ಪೊಲೀಸರಿಗೆ ಸಿಕ್ಕಿದೆ. ಅಲ್ಲಿಗೆ ತೆರಳಿದಾಗ ಮಹಿಳೆ ಕೋಲ್ಕತ್ತದಲ್ಲಿ ಇರುವುದು ಗೊತ್ತಾಗಿದೆ.
ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ, ದೂರುದಾರರ ಮೊಮ್ಮಗ ಮತ್ತು ಮೂರು ವರ್ಷದ ಮತ್ತೊಂದು ಮಗುವನ್ನು ರಕ್ಷಿಸಿದ್ದಾರೆ.
ಆರೋಪಿ ಮಹಿಳೆ ಮತ್ತು ಮಕ್ಕಳನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯನ್ನು ಏಪ್ರಿಲ್ 13 ರಂದು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.