ADVERTISEMENT

ಬಡತನ| ₹50 ಸಾವಿರಕ್ಕೆ ಮಗು ಮಾರಾಟ: ಜಾರ್ಖಂಡ್ CM ಸೂಚನೆಯ ಮೇರೆಗೆ ಮಗುವಿನ ರಕ್ಷಣೆ

ಪಿಟಿಐ
Published 7 ಸೆಪ್ಟೆಂಬರ್ 2025, 15:49 IST
Last Updated 7 ಸೆಪ್ಟೆಂಬರ್ 2025, 15:49 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಮೇದಿನಿನಗರ (ಜಾರ್ಖಂಡ್): ಬಡತನದ ಕಾರಣದಿಂದಾಗಿ ಕೇವಲ ₹50,000ಕ್ಕೆ ಮಾರಾಟ ಮಾಡಲಾಗಿದ್ದ ಮಗುವನ್ನು ರಕ್ಷಿಸಿರುವುದಾಗಿ ಜಾರ್ಖಂಡ್‌ ಪೊಲೀಸ್‌ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸೂಚನೆಯ ಮೇರೆಗೆ ಕಾರ್ಯತತ್ಪರರಾದ ಪೊಲೀಸರು ಮಗುವನ್ನು ಸಂರಕ್ಷಿಸಿದರು. 

ADVERTISEMENT

ಲೆಸ್ಲಿಗಂಜ್‌ನ ಲೋಟ್ವಾ ಗ್ರಾಮದ ದಂಪತಿ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿದ್ದಾಗಿ ತಿಳಿದುಬಂತು. ಪಲಾಮು ಜಿಲ್ಲಾಡಳಿತದ ಸಿಬ್ಬಂದಿ ತಕ್ಷಣವೇ ಆ ಕುಟುಂಬಕ್ಕೆ 20 ಕೆ.ಜಿ. ಆಹಾರಧಾನ್ಯ ವಿತರಿಸಿದರು. ವಿವಿಧ ಯೋಜನೆಗಳ ಮೂಲಕ ಅವರಿಗೆ ಸರ್ಕಾರದ ನೆರವು ದಕ್ಕಿಸಿಕೊಡುವ ಪ್ರಯತ್ನಗಳೂ ನಡೆದಿವೆ ಎಂದು ಅಧಿಕಾರಿ ಸುನಿಲ್ ಕುಮಾರ್ ಸಿಂಗ್ ಮಾಹಿತಿ ನೀಡಿದರು. 

‘ಪತ್ನಿ ಪಿಂಕಿ ದೇವಿ ಮಗುವನ್ನು ಹಡೆದ ನಂತರ ಅನಾರೋಗ್ಯಕ್ಕೆ ತುತ್ತಾದಳು. ಅವಳ ಚಿಕಿತ್ಸೆಗೆ ಹಣವಿರಲಿಲ್ಲ. ಮಳೆಯ ಕಾರಣದಿಂದಾಗಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಕಟ್ಟಿಕೊಂಡಿದ್ದ ಗುಡಿಸಲೂ ಮಳೆಯಿಂದ ನಾಶವಾಗಿದ್ದು, ಇನ್ನೂ ನಾಲ್ಕು ಮಕ್ಕಳ ಸಂಸಾರ ತೂಗಿಸುವುದೇ ಕಷ್ಟವಾಗಿತ್ತು. ಹೀಗಾಗಿ ದಲ್ಲಾಳಿಯೊಬ್ಬರಿಗೆ ಮಗುವನ್ನು ಮಾರಿಬಿಟ್ಟೆವು’ ಎಂದು ರಾಮಚಂದ್ರ ರಾಮ್ ಸುದ್ದಿಗಾರರಿಗೆ ಹೇಳಿದರು. 

ರಾಮ್‌ ಅವರು ಉತ್ತರ ಪ್ರದೇಶದ ಮಿರ್ಜಾಪುರದವರು. ಅವರ ಪತ್ನಿ ಸ್ಥಳೀಯರು. ತಮ್ಮ ತಂದೆ ನೀಡಿದ್ದ ತುಂಡು ಭೂಮಿಯಲ್ಲೇ ಆಕೆ ಮತ್ತು ರಾಮ್ ಗುಡಿಸಲು ನಿರ್ಮಿಸಿಕೊಂಡಿದ್ದರು. ಕೂಲಿ ಕೆಲಸ ಸಿಗದೇ ಇದ್ದಾಗ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದುದಾಗಿ ಅವರು ಹೇಳಿಕೊಂಡರು. 

ರಾಮ್ ಅವರ ಬಳಿ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಲು ಆಧಾರ್ ಕಾರ್ಡ್ ಆಗಲೀ, ರೇಷನ್ ಕಾರ್ಡ್ ಆಗಲೀ ಇಲ್ಲ. ಮಗುವನ್ನು ರಕ್ಷಿಸಿರುವುದಾಗಿ ಲೆಸ್ಲಿಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಉತ್ತಮ್ ಕುಮಾರ್‌ ರೈ ತಿಳಿಸಿದರು. 

ಸ್ಥಳೀಯ ಮಾಧ್ಯಮದಲ್ಲಿ ಪ್ರಕಟವಾಗಿದ್ದ ವರದಿಯನ್ನು ಓದಿ, ಮುಖ್ಯಮಂತ್ರಿ ಸೊರೇನ್ ಅವರು ಮಗುವನ್ನು ರಕ್ಷಿಸುವಂತೆ ಸೂಚನೆ ನೀಡಿದ್ದಾಗಿ ಅಧಿಕಾರಿಗಳು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.