ADVERTISEMENT

ಮಸೂದ್‌ಗೆ ಜಾಗತಿಕ ಉಗ್ರ ಪಟ್ಟ: ಭಾರತ ಸಂಯಮದ ನಿರ್ಧಾರ

ಪಿಟಿಐ
Published 16 ಮಾರ್ಚ್ 2019, 20:17 IST
Last Updated 16 ಮಾರ್ಚ್ 2019, 20:17 IST
ಮಸೂದ್‌ ಅಜರ್‌ 
ಮಸೂದ್‌ ಅಜರ್‌    

ನವದೆಹಲಿ: ಎಲ್ಲಿಯವರೆಗೆ ಚೀನಾ ಸಮಯ ತೆಗೆದುಕೊಳ್ಳುತ್ತದೊಅಲ್ಲಿಯವರೆಗೆ ಭಾರತ ತಾಳ್ಮೆವಹಿಸಿ ಕಾಯುತ್ತದೆ. ಆದರೆ ಭಯೋತ್ಪಾದನೆ ಸಂಬಂಧ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

ಜೈಷೆ–ಎ– ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಪದೇ ಪದೇ ಚೀನಾ ಅಡ್ಡಗಾಲು ಹಾಕುತ್ತಿದೆ. ಬುಧವಾರ ಸಹ ಅಜರ್‌ ಬೆಂಬಲಿಸಲು ಚೀನಾ ಮುಂದಾಗಿತ್ತು. ಈ ಬಗ್ಗೆ ಭಾರತ ತನ್ನ ಪ್ರತಿಕ್ರಿಯೆ ನೀಡಿದೆ.

ಪಾಕಿಸ್ತಾನದ ಜತೆ ಚೀನಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವರೆಗೆ ಭಾರತ ತಾಳ್ಮೆ ವಹಿಸುತ್ತದೆ. ಚೀನಾ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ದೇಶಗಳ ಜತೆಗೆ ಅಜರ್‌ ವಿರುದ್ಧ ಸಾಕ್ಷ್ಯಗಳನ್ನು ಭಾರತ ಹಂಚಿಕೊಂಡಿದೆ ಎಂದು ಕೇಂದ್ರ ತಿಳಿಸಿದೆ.

ADVERTISEMENT

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭದ್ರತಾ ಮಂಡಳಿಯ ಕ್ರಮಕ್ಕೆ ಚೀನಾ ಬುಧವಾರ ನಾಲ್ಕನೇ ಬಾರಿ ಅಡ್ಡಿಪಡಿಸಿದೆ. ಈ ಪ್ರಸ್ತಾವಕ್ಕೆ ಕೆಲವು ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ ಎಂದು ಚೀನಾ ಹೇಳಿದೆ. ಈ ಕ್ರಮ ನಿರಾಶೆಯುಂಟು ಮಾಡಿದೆ.

ಜೈಷ್‌ ಉಗ್ರನ ವಿರುದ್ಧ ಸಾಕಷ್ಟು ಪ್ರಕರಣಗಳು ಇರುವುದರಿಂದ ಅಜರ್ ಜಾಗತಿಕ ಉಗ್ರನ ಪಟ್ಟಿಯಲ್ಲಿ ಅಂತಿಮವಾಗಿಯಾದರೂ ಸೇರುತ್ತಾನೆ ಎಂಬ ಬಗ್ಗೆ ‘ಜಾಗರೂಕತೆಯ ವಿಶ್ವಾಸ’ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಜತೆ ಸದಸ್ಯ ರಾಷ್ಟ್ರಗಳ ಚರ್ಚೆ
ವಾಷಿಂಗ್ಟನ್‌: ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ಚೀನಾ ಜತೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ ಸೌಹಾರ್ದಯುತವಾಗಿ ಚರ್ಚೆ ಆರಂಭಿಸಿವೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯರಾದ ಈ ರಾಷ್ಟ್ರಗಳು ಮಸೂದ್‌ ಅಜರ್‌ ವಿಷಯದಲ್ಲಿ ಚೀನಾ ತನ್ನ ನಿಲುವು ಬದಲಾಯಿಸಿಕೊಳ್ಳಬೇಕು ಎಂದು ಮನವೊಲಿಸುವ ಪ್ರಯತ್ನದಲ್ಲಿ ತೊಡಗಿವೆ.

ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಸೂದ್‌ಗೆ ನಿಷೇಧ ವಿಧಿಸಲು ತಡೆವೊಡ್ಡಿತ್ತು. ನಾಲ್ಕನೇ ಬಾರಿ ಚೀನಾ ಕೈಗೊಂಡ ನಿರ್ಧಾರಕ್ಕೆ ಭಾರತ ಹಾಗೂ ಇತರ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಹೀಗಾಗಿ, ಈ ಮೂರು ರಾಷ್ಟ್ರಗಳು ಹೊಸ ಪ್ರಯತ್ನ ಆರಂಭಿಸಿವೆ.

ಭದ್ರತಾ ಮಂಡಳಿಯಲ್ಲೂ ಈ ವಿಷಯದ ಬಗ್ಗೆ ಹೊಸದಾಗಿ ಪ್ರಸ್ತಾವ ಮಂಡಿಸಲು ಸಿದ್ದತೆ ನಡೆಸಿದ್ದು, ಇದಕ್ಕೂ ಪೂರ್ವಭಾವಿಯಾಗಿ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.