ನವದೆಹಲಿ: ಗಡಿಯಲ್ಲಿನ ವಿವಾದ ಪರಿಹರಿಸುವ ಮಾತುಕತೆಗಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ಭಾರತಕ್ಕೆ ಬರಲಿದ್ದಾರೆ.
ಗ್ಯಾಲ್ವನ್ ಕಣಿವೆಯಲ್ಲಿ 2020ರಲ್ಲಿ ನಡೆದ ಘರ್ಷಣೆಯ ನಂತರ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಗೊಳಿಸುವ ಮಾತುಕತೆಯಲ್ಲಿ ಅವರು ಭಾಗಿಯಾಗಲಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿದ ನಂತರ, ಭಾರತ– ಅಮೆರಿಕದ ನಡುವಿನ ಸಂಬಂಧದಲ್ಲಿ ತುಸು ಬಿರುಕು ಕಾಣಿಸಿಕೊಂಡಿರುವ ಹೊತ್ತಿನಲ್ಲಿ ವಾಂಗ್ ಎರಡು ದಿನ ಭೇಟಿ ನೀಡುತ್ತಿರುವುದು ಮಹತ್ವದ ವಿದ್ಯಮಾನವಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಜತೆ ವಾಂಗ್ ಗಡಿ ಸಮಸ್ಯೆ ಕುರಿತಂತೆ ಚರ್ಚಿಸಲಿದ್ದಾರೆ. ಇದು 24ನೇ ಸುತ್ತಿನ ಚರ್ಚೆಯಾಗಿದೆ. ಈ ಇಬ್ಬರೂ ಗಡಿ ಸಮಸ್ಯೆಯ ಪರಿಹಾರಕ್ಕಾಗಿ ಎರಡೂ ದೇಶಗಳಿಂದ ನಿಯೋಜನೆಗೊಂಡಿರುವ ವಿಶೇಷ ಪ್ರತಿನಿಧಿಗಳಾಗಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಎರಡೂ ದೇಶಗಳ 50 ಸಾವಿರದಿಂದ 60 ಸಾವಿರ ಸೈನಿಕರು ಜಮಾಯಿಸಿದ್ದು, ಮುಂಚೂಣಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಜೊತೆಗೆ ಶಾಂತ ವಾತಾವರಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಹ ವಾಂಗ್ ಯಿ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.