ADVERTISEMENT

ಚೀನಾ, ಪಾಕಿಸ್ತಾನ ಮತ್ತು ಭಾರತ ದೇಶಗಳ ಅಣ್ವಸ್ತ್ರ ಪೈಪೋಟಿ

ಬಾಂಬ್‌ ಸಂಗ್ರಹ ಹೆಚ್ಚಿಸಲು ಸಿದ್ಧತೆ

ಪಿಟಿಐ
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST
ಯುರೇನಿಯಂ ಮಾದರಿ
ಯುರೇನಿಯಂ ಮಾದರಿ   

ನವದೆಹಲಿ: ಚೀನಾ, ಪಾಕಿಸ್ತಾನ ಮತ್ತು ಭಾರತ ಕ್ರಮವಾಗಿ 350, 165 ಮತ್ತು 156 ಅಣುಬಾಂಬ್‌ಗಳನ್ನು ಈ ವರ್ಷದ ಜನವರಿ ಹೊತ್ತಿಗೆ ಹೊಂದಿದ್ದವು. ಈ ಮೂರೂ ದೇಶಗಳು ತಮ್ಮ ಅಣ್ವಸ್ತ್ರ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ ಎಂದು ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ (ಸಿಪ್ರಿ) ಹೇಳಿದೆ.

‘ಅಣ್ವಸ್ತ್ರಗಳನ್ನು ಆಧುನೀಕರಿಸುವ ಮತ್ತು ಸಂಖ್ಯೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಚೀನಾ ಈಗಾಗಲೇ ಆರಂಭಿಸಿದೆ. ಭಾರತ ಮತ್ತು ಪಾಕಿಸ್ತಾನ ಕೂಡ ಇದೇ ಹಾದಿಯಲ್ಲಿವೆ’ ಎಂದು ಸಿ‍ಪ್ರಿ ನಡೆಸಿದ ಅಧ್ಯಯನ ತಿಳಿಸಿದೆ.

ಅಣ್ವಸ್ತ್ರ ತಯಾರಿಸುವುದಕ್ಕಾಗಿ ಈ ಮೂರೂ ದೇಶಗಳು ಸಂಗ್ರಹಿಸಿ ಇರಿಸಿರುವ ಕಚ್ಚಾ ವಸ್ತುಗಳ ಬಗ್ಗೆಯೂ ಸಿಪ್ರಿ ವರದಿಯಲ್ಲಿ ಮಾಹಿತಿ ಇದೆ.

ADVERTISEMENT

‘ಅಣ್ವಸ್ತ್ರ ತಯಾರಿಸಲು ಯುರೇನಿಯಂ ಅಥವಾ ಪ್ಲುಟೋನಿಯಂ ಬಳಸುತ್ತಾರೆ. ಭಾರತ ಮತ್ತು ಇಸ್ರೇಲ್‌ ಪ್ಲುಟೋನಿಯಂ ಉತ್ಪಾದಿಸುತ್ತಿವೆ. ಪಾಕಿಸ್ತಾನವು ಮುಖ್ಯವಾಗಿ ಯುರೇನಿಯಂ ಉತ್ಪಾದಿಸುತ್ತಿದೆ. ಈಗ, ಪ್ಲುಟೋನಿಯಂ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನಾ, ಫ್ರಾನ್ಸ್‌, ರಷ್ಯಾ, ಬ್ರಿಟನ್‌ ಮತ್ತು ಅಮೆರಿಕದಲ್ಲಿ ಯುರೇನಿಯಂ ಮತ್ತು ‍ಪ್ಲುಟೋನಿಯಂ ಎರಡನ್ನೂ ಉತ್ಪಾದಿಸಲಾಗುತ್ತಿದೆ. ಈ ದೇಶಗಳು ಅಣ್ವಸ್ತ್ರಕ್ಕೆ ಈ ಎರಡೂ ಕಚ್ಚಾವಸ್ತುಗಳನ್ನು ಬಳಸುತ್ತಿವೆ.

ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳುಕ್ಷಿಪಣಿ ಪರೀಕ್ಷೆಗಳ ಬಗ್ಗೆ ಹೇಳಿಕೆಗಳನ್ನು ನೀಡಿವೆ. ಆದರೆ, ತಮ್ಮಲ್ಲಿರುವ ಅಣ್ವಸ್ತ್ರ ಸಂಗ್ರಹದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಜಗತ್ತಿನಲ್ಲಿ ಒಟ್ಟು 13,080 ಅಣ್ವಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳ ಪೈಕಿ ಸುಮಾರು 2,000 ಅಣ್ವಸ್ತ್ರಗಳನ್ನು ಕಾರ್ಯಾಚರಣೆಗೆ ಸನ್ನದ್ಧವಾದ ಸ್ಥಿತಿಯಲ್ಲಿಯೇ ಇರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತ, ಪಾಕ್‌, ಚೀನಾ ಸಂಬಂಧ:ಭಾರತ ಮತ್ತು ಚೀನಾದ ನಡುವೆ ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷ ನಡೆದು ಒಂದು ವರ್ಷ ಕಳೆದಿದೆ. ಈ ಸಂಘರ್ಷದ ಸಂದರ್ಭದಲ್ಲಿ 45 ವರ್ಷದಲ್ಲೇ ಮೊದಲ ಬಾರಿಗೆ ಎರಡೂ ಕಡೆ ಜೀವಹಾನಿಯೂ ಆಗಿತ್ತು. ಪ್ಯಾಂಗಾಂಗ್‌ ಸರೋವರ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿಯೂ ದೊಡ್ಡ ಪ್ರಗತಿ ಆಗಿಲ್ಲ. ಸಂಘರ್ಷ ಇರುವ ಹಲವು ಪ್ರದೇಶಗಳ ಬಗೆಗಿನ ಮಾತುಕತೆಯೂ ಸ್ಥಗಿತಗೊಂಡಿದೆ.

ಭಾರತ ಮತ್ತು ಪಾಕಿಸ್ತಾನವು ಫೆಬ್ರುವರಿ 25ರಂದು ಜಂಟಿ ಹೇಳಿಕೆ ಪ್ರಕಟಿಸಿ ನಿಯಂತ್ರಣ ರೇಖೆಯುದ್ದಕ್ಕೂ ಕದನವಿರಾಮ ಘೋಷಿಸಿವೆ. ಎರಡೂ ದೇಶಗಳ ಸೇನಾ ಕಾರ್ಯಾಚರಣೆ ಮಹಾ ನಿರ್ದೇಶಕರ ನಡುವಣ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

ಆಯುಧ ಆಮದು

2016ರಿಂದ 2020ರ ಅವಧಿಯಲ್ಲಿ ಸೌದಿ ಅರೇಬಿಯಾ, ಭಾರತ, ಈಜಿಪ್ಟ್‌, ಆಸ್ಟ್ರೇಲಿಯಾ ಮತ್ತು ಚೀನಾ ಶಸ್ತ್ರಾಸ್ತ್ರಗಳನ್ನು ಅತಿ ಹೆಚ್ಚು ಆಮದು ಮಾಡಿಕೊಂಡಿವೆ. ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಸೌದಿ ಅರೇಬಿಯಾದ ಪಾಲು ಶೇ 11ರಷ್ಟಿದ್ದರೆ, ಭಾರತದ ಪಾಲು ಶೇ 9.5ರಷ್ಟು ಎಂದು ವರದಿಯು ಹೇಳಿದೆ.

ಅಣುಶಕ್ತ ದೇಶಗಳು

ಜಗತ್ತಿನ ಒಂಬತ್ತು ದೇಶಗಳು ಮಾತ್ರ ಅಣ್ವಸ್ತ್ರಗಳನ್ನು ಹೊಂದಿವೆ. ಅವುಗಳೆಂದರೆ, ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ.

ಜಗತ್ತಿನಲ್ಲಿ ಇರುವ 13,080 ಅಣ್ವಸ್ತ್ರಗಳಲ್ಲಿ ಶೇ 90ರಷ್ಟು ಅಮೆರಿಕ ಮತ್ತು ರಷ್ಯಾ ಬಳಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.