ADVERTISEMENT

ಪೂರ್ವ ಲಡಾಖ್‌ನಲ್ಲಿ ಸೇನೆ ಬಲಪಡಿಸುತ್ತಿರುವ ಚೀನಾ, ಆಧುನಿಕ ತಂಗುದಾಣಗಳ ಸ್ಥಾಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 4:16 IST
Last Updated 28 ಸೆಪ್ಟೆಂಬರ್ 2021, 4:16 IST
ಜೊಜಿಲಾ ಪರ್ವತ ಪ್ರದೇಶದಲ್ಲಿ ಭಾರತೀಯ ಸೈನಿಕರು, ಸಾಂದರ್ಭಿಕ ಚಿತ್ರ (ಎಎಫ್‌ಪಿ)
ಜೊಜಿಲಾ ಪರ್ವತ ಪ್ರದೇಶದಲ್ಲಿ ಭಾರತೀಯ ಸೈನಿಕರು, ಸಾಂದರ್ಭಿಕ ಚಿತ್ರ (ಎಎಫ್‌ಪಿ)   

ಲಡಾಖ್‌: ಪೂರ್ವ ಲಡಾಖ್‌ ಪ್ರದೇಶದಲ್ಲಿ ಕಳೆದ ವರ್ಷ ಚೀನಾ ಸೈನಿಕರನ್ನು ಭಾರತ ಸೇನೆಯು ಹಿಮ್ಮೆಟ್ಟಿಸಿದ ಬಳಿಕ ಚೀನಾ ಗೌಪ್ಯವಾಗಿ ರಕ್ಷಣಾ ಪಡೆಯನ್ನು ಬಲಪಡಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೂರ್ವ ಲಡಾಖ್‌ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ನಡುವಣ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ ಮಂದಿ ಈ ಮಾಹಿತಿಯನ್ನು ನೀಡಿದ್ದಾರೆ. ಅತ್ಯಾಧುನಿಕ ಕಂಟೈನರ್‌ ಒಳಗೊಂಡ ತಂಗುದಾಣಗಳನ್ನು ಚೀನಾ ದುರ್ಗಮ ಪ್ರದೇಶಗಳಲ್ಲಿ ಸ್ಥಾಪಿಸುತ್ತಿದೆ. ಇದುವರೆಗೆ ಸೇನೆಯನ್ನೇ ಬಳಸದ ಸ್ಥಳಗಳಲ್ಲೂ ಸೈನಿಕರನ್ನು ನಿಯೋಜಿಸಿದೆ.

ಈ ಪ್ರದೇಶದಲ್ಲಿ ಭಾರತ ತನ್ನ ಸೇನೆಯನ್ನು ವಿಸ್ತರಿಸಿದ ಬೆನ್ನಲ್ಲೇ ಚೀನಾದಿಂದ ಈ ಬೆಳವಣಿಗೆ ನಡೆದಿರುವುದಾಗಿ ನಿಕಟವರ್ತಿಗಳು ಸೋಮವಾರ ಹೇಳಿದ್ದಾರೆ.

ADVERTISEMENT

ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಪ್ರದೇಶಗಳಲ್ಲಿ ತಂಗುದಾಣಗಳು ತಲೆಯೆತ್ತಿವೆ. ತಾಶಿಗೊಂಗ್‌, ಮಾಂಜ, ಹಾಟ್‌ ಸ್ಪ್ರಿಂಗ್ಸ್‌ ಮತ್ತು ಚುರುಪ್‌ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಚೀನಾದ ಸೇನಾ ತಂಗುದಾಣಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಈ ಪ್ರದೇಶದಲ್ಲಿ ಚೀನಾ ಸೈನಿಕರನ್ನು ಭಾರತದ ಸೇನೆಯು ಹಿಮ್ಮೆಟ್ಟಿಸಿದ್ದಕ್ಕೆ ಪ್ರತ್ಯುತ್ತರದ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಪ್ರಮುಖವಾಗಿ ಕಳೆದ ವರ್ಷ ನಡೆದ ಗಾಲ್ವನ್‌ ಕಣಿವೆ ಸಂಘರ್ಷದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಚೀನಾ ಈ ಹಿಂದೆ ಸೇನೆಯನ್ನು ಬಳಕೆ ಮಾಡದ ಪ್ರದೇಶಗಳಲ್ಲೂ ಸೇನೆಯನ್ನು ಸ್ಥಾಪಿಸಿದೆ. ಇಂತಹ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಇದುವರೆಗೆ ಚೀನಾ ಸೇನಾ ಚಟುವಟಿಕಗಳನ್ನು ನಡೆಸಿರಲಿಲ್ಲ ಎನ್ನಲಾಗಿದೆ.

'ನಮ್ಮ ತಂತ್ರಗಾರಿಕೆಯಿಂದ ಅವರಿಗೆ ನೋವಾಗಿದೆ. ಅದಕ್ಕೆ ಅವರು ಹೀಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚೀನಾದ ಸೇನೆಯನ್ನು ಮುನ್ನಡೆಸುವ ಮತ್ತು ಪೂರ್ವಭಾವಿ ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿದೆ' ಎಂದು ನಿಕಟವರ್ತಿಗಳ ಪೈಕಿ ಓರ್ವರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಪೂರ್ವ ಲಡಾಖ್‌ ಮತ್ತು ಇತರ ಪ್ರದೇಶಗಳ ಅತ್ಯಂತ ಕಠಿಣ ಸ್ಥಳಗಳಲ್ಲಿ ಕನಿಷ್ಠ 3,500 ಕಿ.ಮೀ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ರಸ್ತೆ, ಸುರಂಗ, ಸೇತುವೆಗಳು ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ಭಾರತ ನಿರ್ಮಿಸುತ್ತಿದೆ. ಚೀನಾ ಕೂಡ ಪೂರ್ವ ಲಡಾಖ್‌ನ ಸಮೀಪ ವಾಯು ನೆಲೆ ಮತ್ತು ರಕ್ಷಣಾ ತಾಣಗಳನ್ನು ನಿರ್ಮಿಸುತ್ತಿದೆ.

ಪ್ಯಾಂಗಾಂಗ್‌ ಸರೋವರದ ಪ್ರದೇಶದಲ್ಲಿ ಕಳೆದ ವರ್ಷ ಮೇ 5ಕ್ಕೆ ಭಾರತ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.