ADVERTISEMENT

ಸಾಲ ಕೊಡುವ ಕಾನೂನುಬಾಹಿರ ಚೀನಾದ ಆ್ಯಪ್‌ಗಳು: ಇಲ್ಲಿದೆ ಪಟ್ಟಿ

ಪಿಟಿಐ
Published 13 ಜುಲೈ 2022, 4:20 IST
Last Updated 13 ಜುಲೈ 2022, 4:20 IST
ಒಳಚಿತ್ರದಲ್ಲಿ ಚೀನಾದ ಆರೋಪಿ ಲಿಯು ಯೀ
ಒಳಚಿತ್ರದಲ್ಲಿ ಚೀನಾದ ಆರೋಪಿ ಲಿಯು ಯೀ   

ಭುವನೇಶ್ವರ: ಕಾನೂನಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಚೀನಾ ಮೂಲದ ಆ್ಯಪ್‌ಗಳನ್ನು ಬ್ಯೂರೋ ಆಫ್‌ ಇಮಿಗ್ರೇಷನ್‌ (ಇಒಡ್ಲ್ಯು) ಪಟ್ಟಿ ಮಾಡಿದೆ. ಹಗರಣದ ಪ್ರಮುಖ ಆರೋಪಿ ಚೀನಾದ ಲಿಯು ಯೀ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ್ದು, ಹುಡುಕಾಟ ನಡೆದಿದೆ.

2019ರಲ್ಲಿ ಬೆಂಗಳೂರಿನ ಮೂಲಕ ಲಿಯು ಯೀ ಅವ್ಯವಹಾರ ಆರಂಭಿಸಿದ್ದ. ಈತ ಕೆಲಸ ಮಾಡುತ್ತಿರುವ ಕಂಪನಿಯಮಾತೃ ಸಂಸ್ಥೆ ಚೀನಾದ ಹಾಂಗ್‌ಝುನಲ್ಲಿರುವ ಝಿಯಾನ್‌ಬಿಂಗ್‌ ಟೆಕ್ನಾಲಜಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಚೀನಾದ ಕನಿಷ್ಠ ಇಬ್ಬರು ಲಿಯು ಯೀಗೆ ಸೂಚನೆಗಳನ್ನು ಕಳುಹಿಸುತ್ತಿದ್ದರು ಎಂದು ಇಒಡ್ಲ್ಯು ವಿವರಿಸಿದೆ.

ಈ ಆ್ಯಪ್‌ಗಳ ಮೂಲಕ ಸಾಲ ತೆಗೆದುಕೊಂಡವರಿಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆಗಳನ್ನು ಒಡ್ಡಲು ಹಲವು ಕಾಲ್‌ಸೆಂಟರ್‌ಗಳನ್ನು ಬಳಕೆ ಮಾಡುತ್ತಿದ್ದರು. ಇದನ್ನು ಗಮನಿಸಿದರೆ ಥೈಲ್ಯಾಂಡ್‌ ಸೇರಿದಂತೆ ಬೇರೆ ರಾಷ್ಟ್ರಗಳಲ್ಲೂ ಇಂತಹ ಅವ್ಯವಹಾರಗಳನ್ನು ನಡೆಸುತ್ತಿರುವ ಬಗ್ಗೆ ಶಂಕೆಯಿದೆ ಎಂದು ಇಒಡ್ಲ್ಯು ಹೇಳಿದೆ.

ADVERTISEMENT

ಕಾನೂನುಬಾಹಿರ ಆ್ಯಪ್‌ಗಳು:
ಕೊಕೊ ಲೋನ್‌, ಜೊಜೊ ಲೋನ್‌, ಸಿಲ್ವರ್‌ ಕ್ರೆಡಿಟ್‌ ಲೋನ್‌, ಗೋಲ್ಡ್‌ ಕ್ಯಾಶ್‌ ಲೋನ್‌, ಲಿಟಲ್‌ ಬೊರೌ, ಲೋನ್‌ ಟ್ಯಾಪ್‌, ಕ್ರೆಡಿಟ್‌ ಲೋನ್‌, ಗೋಲ್ಡ್‌ ಕ್ಯಾಶ್‌ ಲೋನ್‌, ಲಿಟಲ್‌ ಬೊರೌ ಲೋನ್‌ ಟ್ಯಾಪ್‌, ಕ್ರೆಡಿಟ್‌ ಲೋನ್‌, ಸ್ಪೀಡಿ ರುಪೀ ಲೋನ್‌, ಎಕ್ಸ್‌ಪ್ರೆಸ್‌ ಕ್ರೆಡಿಟ್‌ ಲೋನ್‌, ಕ್ರೆಡಿಟ್‌ ಪ್ಲಾನ್‌ ಲೋನ್‌, ರುಪೀ ಡೇ ಲೋನ್‌ ಮುಂತಾದ ಹೆಸರಿನ ಕಾನೂನುಬಾಹಿರ ಆ್ಯಪ್‌ಗಳನ್ನು ಲಿಯು ಯೀ ನಡೆಸುತ್ತಿದ್ದ ಎಂದು ಇಒಡ್ಲ್ಯು ತಿಳಿಸಿದೆ.

ಮಧ್ಯಮ ವರ್ಗದವರೇ ಗುರಿ:
ಕೋವಿಡ್‌ ಸಂಕಷ್ಟದ ಕಾಲದಲ್ಲಿ ರಾಷ್ಟ್ರದಾದ್ಯಂತ ಲಕ್ಷಾಂತರ ಮಂದಿ ವಂಚನೆಗೆ ಒಳಗಾಗಿದ್ದಾರೆ. ಮೇಲೆ ಹೆಸರಿಸಿರುವ ಆ್ಯಪ್‌ಗಳ ಪೈಕಿ ಒಂದೆರಡು ಆ್ಯಪ್‌ಗಳನ್ನು (ಕೊಕೊ ಲೋನ್‌, ಜೊಜೊ ಲೋನ್‌) 1.5 ಲಕ್ಷಕ್ಕೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿದ್ದಾರೆ. ಮುಖ್ಯವಾಗಿ ಸಣ್ಣ ಮೊತ್ತದ ಸಾಲದ ನಿರೀಕ್ಷೆಯಲ್ಲಿರುವ ಮಧ್ಯಮ ವರ್ಗವನ್ನೇ ಹೆಚ್ಚು ಗುರಿಯಾಗಿಸಿಕೊಂಡು ಅವ್ಯವಹಾರ ನಡೆಸಲಾಗುತ್ತಿದೆ ಎಂದು ಇಒಡ್ಲ್ಯು ಹೇಳಿದೆ.

ಅವ್ಯವಹಾರ ಹೇಗೆ:
ಮೊಬೈಲ್‌ನ ಪ್ಲೇ‌ಸ್ಟೋರ್‌ನಲ್ಲಿ ಕಾನೂನುಬಾಹಿರ ಆ್ಯಪ್‌ಗಳು ಡೌನ್‌ಲೋಡ್‌ ಆದ ಬಳಿಕ ₹ 3,000 ದಿಂದ ₹ 10,000 ದಷ್ಟು ಸಾಲ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಒಂದೇ ವಾರದಲ್ಲಿ ಮಿತಿಮೀರಿದ ಬಡ್ಡಿಯೊಂದಿಗೆ ಸಾಲ ಮರುಪಾವತಿ ಮಾಡುವಂತೆ ಕರೆಗಳು ಬರಲು ಆರಂಭಗೊಳ್ಳುತ್ತವೆ. ಕೇಳಿದಷ್ಟು ಬಡ್ಡಿಯನ್ನು ಪಾವತಿಸದಿದ್ದರೆ ಅವಾಚ್ಯವಾಗಿ ನಿಂದಿಸುವುದು, ಅಶ್ಲೀಲ ಚಿತ್ರಗಳನ್ನು ಕಳುಹಿಸುವುದು ಹೀಗೆ ಹಲವು ರೀತಿಯಲ್ಲಿ ಬೆದರಿಕೆಯೊಡ್ಡುವ ಮೂಲಕ ಬಡ್ಡಿ ಜೊತೆಗೆ ಕೊಟ್ಟ ಸಾಲವನ್ನು ಕಿತ್ತುಕೊಳ್ಳಲಾಗುತ್ತದೆ ಎಂದು ಇಒಡ್ಲ್ಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.