ಗುವಾಹಟಿ: ಜನಪ್ರಿಯ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ‘ಇವೆಂಟ್ ಮ್ಯಾನೇಜರ್’ ಶ್ಯಾಮಕಾನು ಮಹಾಂತ ವಿರುದ್ಧ ಅಸ್ಸಾಂ ಪೊಲೀಸರು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.
ಸಂಘಟಿತ ಅಪರಾಧ ಕೃತ್ಯಗಳು ಮತ್ತು ಹಣ ಅಕ್ರಮ ವಹಿವಾಟಿನ ಮೂಲಕ ಆಸ್ತಿ ಗಳಿಸಿರುವ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.
ಶ್ಯಾಮಕಾನು ಅವರು ಅಸ್ಸಾಂನ ಮುಖ್ಯ ಮಾಹಿತಿ ಆಯುಕ್ತ ಭಾಸ್ಕರ್ ಜ್ಯೋತಿ ಮಹಾಂತ್ ಅವರ ಕಿರಿಯ ಸಹೋದರ. ಅವರ ಇನ್ನೊಬ್ಬ ಅಣ್ಣ ನಾನಿ ಗೋಪಾಲ್ ಮಹಾಂತ್ ಗುವಾಹಟಿ ವಿಶ್ವವಿದ್ಯಾಲಯದ ಕುಲಪತಿ. ಇದಕ್ಕೂ ಮುನ್ನ ನಾನಿ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಶೈಕ್ಷಣಿಕ ಸಲಹೆಗಾರರಾಗಿದ್ದರು.
ಸಿಐಡಿ ಅಧಿಕಾರಿಗಳು ಶ್ಯಾಮಕಾನು ಅವರ ಮನೆ ಮೇಲೆ ಗುರುವಾರ ಮತ್ತು ಶುಕ್ರವಾರ ನಡೆಸಿದ್ದ ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅವುಗಳ ಪೈಕಿ, ಒಂದೇ ಸಂಸ್ಥೆಯ ಹೆಸರಿನಲ್ಲಿ ಹಲವು ಪ್ಯಾನ್ ಕಾರ್ಡ್‌ಗಳು, ವಿವಿಧ ಕಂಪನಿಗಳು ಮತ್ತು ಅಧಿಕಾರಿಗಳ 30 ಸ್ಟ್ಯಾಂಪ್ ಸೀಲುಗಳು ಹಾಗೂ ಬೇನಾಮಿ ಆಸ್ತಿಗಳಿಗೆ ಸಂಬಂಧಿಸಿದ ಹಲವು ದಾಖಲೆಗಳು ಸೇರಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದ್ದ ವೇಳೆ ಜುಬೀನ್ ಉಸಿರುಗಟ್ಟಿ ಮೃತಪಟ್ಟಿದ್ದರು. ಸಿಂಗಪುರದಲ್ಲಿ ನಡೆದಿದ್ದ ಈಶಾನ್ಯ ಭಾರತ ಉತ್ಸವದ ಆಯೋಜಕರ ವಿರುದ್ಧ ಅಸ್ಸಾಂನಲ್ಲಿ 60ಕ್ಕೂ ಅಧಿಕ ದೂರುಗಳು ದಾಖಲಾಗಿರುವ ಕಾರಣ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.