ನವದೆಹಲಿ: ಚೀನಾ ತನ್ನ ಕಣ್ಗಾವಲು ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಉಪಗ್ರಹಗಳ ಸಂಖ್ಯೆ ಹೆಚ್ಚಿಸುತ್ತಿದೆ. ಇದು, ಹೊಸ ಬಗೆಯ ಬೆದರಿಕೆಯಾಗಿ ಹೊರಹೊಮ್ಮುತ್ತಿದೆ ಎಂದು ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಏರ್ ಮಾರ್ಷಲ್ ಅಶುತೋಷ್ ದೀಕ್ವಿತ್ ಬುಧವಾರ ಹೇಳಿದ್ದಾರೆ.
‘2010ರಲ್ಲಿ ಚೀನಾದ 36 ಉಪಗ್ರಹಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದವು. 2024ರಲ್ಲಿ ಇವುಗಳ ಸಂಖ್ಯೆಯನ್ನು 360ಕ್ಕೆ ಹೆಚ್ಚಿಸಿದೆ. ಇವುಗಳನ್ನು ಐಎಸ್‌ಆರ್(ಗುಪ್ತಚರ, ಕಣ್ಗಾವಲು ಹಾಗೂ ಗಸ್ತು) ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಇಲ್ಲಿನ ಸುಬ್ರತೊ ಪಾರ್ಕ್‌ನಲ್ಲಿ ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್(ಸಿಎಪಿಎಸ್) ಹಾಗೂ ಇಂಡಿಯನ್ ಮಿಲಿಟರಿ ರಿವ್ಯೂಸ್(ಐಎಂಆರ್) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚೀನಾ ಮಿಲಿಟರಿ ಉದ್ಧೇಶದ ಬಾಹ್ಯಾಕಾಶ ಕಾರ್ಯಕ್ರಮವನ್ನು ವಿಸ್ತರಿಸುತ್ತಿದೆ. ಚೀನಾ ಸೇನೆಯು ಇತ್ತೀಚೆಗೆ ಕೆಳ ಭೂ ಕಕ್ಷೆಯಲ್ಲಿ ತನ್ನ ಉಪಗ್ರಹಗಳನ್ನು ಅತಿ ಸನಿಹಕ್ಕೆ ತಂದು, ವಿವಿಧ ತಾಲೀಮುಗಳನ್ನು ನಡೆಸಿದೆ. ಚೀನಾದ ಇಂತಹ ನಡೆಗಳ ಬಗ್ಗೆ ನಾವು ಎಚ್ಚರ ವಹಿಸುವುದು ಅಗತ್ಯ’ ಎಂದು ದೀಕ್ಷಿತ್ ವಿವರಿಸಿದರು.
ಇತ್ತೀಚಿನ ‘ಆಪರೇಷನ್ ಸಿಂಧೂರ’ದ ಯಶಸ್ಸು ಉಲ್ಲೇಖಿಸಿದ ಅವರು, ‘ಈ ಕಾರ್ಯಾಚರಣೆಯ ಕರಾರುವಾಕ್ಕು ನಿರ್ವಹಣೆಯಲ್ಲಿ ಇಂಟಿಗ್ರೇಟೆಡ್ ಏರ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್(ಐಎಸಿಸಿಎಸ್) ಪ್ರಮುಖ ಪಾತ್ರ ವಹಿಸಿತ್ತು. ಇದು, ಭಾರತೀಯ ಎಂಜಿನಿಯರಿಂಗ್‌ನ ಶ್ರೇಷ್ಠತೆ ಹಾಗೂ ದೂರದೃಷ್ಟಿಯಿಂದ ಕೂಡಿದ ಕಾರ್ಯತಂತ್ರದ ಪ್ರತೀಕವಾಗಿದೆ’ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.