ADVERTISEMENT

ಪೌರತ್ವ ಮಸೂದೆ ಸೋಮವಾರ ಮಂಡನೆ

ಪಿಟಿಐ
Published 5 ಡಿಸೆಂಬರ್ 2019, 20:00 IST
Last Updated 5 ಡಿಸೆಂಬರ್ 2019, 20:00 IST
   

ನವದೆಹಲಿ: ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿ, ಭಾರತಕ್ಕೆ ಬಂದಿರುವ ಮುಸ್ಲಿಮೇತರರಿಗೆ ಇಲ್ಲಿನ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆ ಸೋಮವಾರ (ಡಿ. 9) ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಮರುದಿನವೇ ಅದಕ್ಕೆ ಅಂಗೀಕಾರ ಲಭಿಸುವ ನಿರೀಕ್ಷೆಯೂ ಇದೆ.

ಇದಾದ ಬಳಿಕ ಸರ್ಕಾರವು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಿದೆ. ಲೋಕಸಭೆಯಲ್ಲಿ ಎನ್‌ಡಿಎಗೆ ಸಂಖ್ಯಾಬಲ ಇರುವುದರಿಂದ ಮಸೂದೆ ಅಂಗೀಕಾರಕ್ಕೆ ಅಡಚಣೆ ಆಗಲಾರದು. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆ ಇದೆ. ಆದರೆ, ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ರಾಜ್ಯಸಭೆಯ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸಿದೆ. ಇಂತಹ

ಪಕ್ಷದ ಭರವಸೆ: ‘ಪೌರತ್ವ (ತಿದ್ದುಪಡಿ) ಮಸೂದೆ ಚುನಾವಣೆಗೂ ಮುನ್ನ ಮತದಾರರಿಗೆ ಬಿಜೆಪಿಯು ಜನರಿಗೆ ನೀಡಿದ್ದ ಭರವಸೆಯಾಗಿತ್ತು. ಅದನ್ನು ಈಡೇರಿಸಲು ಪಕ್ಷ ಬದ್ಧವಾಗಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿದ್ದಾರೆ.

ADVERTISEMENT

‘ಕೆಲವರಿಗೆ ಪೌರತ್ವ ನೀಡಬೇಕೆಂದು ಇಲ್ಲಿ ಕೆಲವರ ‘ಹೃದಯಗಳು ಮಿಡಿಯುತ್ತಿವೆ’. ಅಂಥವರಿಗಾಗಿ ಸಹಜವಾದ ಪೌರತ್ವ ಕಾಯ್ದೆಯೇ ಇದೆ. ಅಕ್ರಮವಾಗಿ ಉಳಿದುಕೊಂಡಿರುವ ಎಲ್ಲರೂ ನುಸುಳುಕೋರರೇ ಆಗಿದ್ದಾರೆ. ಜಗತ್ತಿನ ಯಾವ ರಾಷ್ಟ್ರವೂ ನುಸುಳುಕೋರರಿಗೆ ಆಶ್ರಯ ನೀಡುವುದಿಲ್ಲ’ ಎಂದು ಅವರು ಹೆಳಿದ್ದಾರೆ.

ನಿಲ್ಲದ ಪ್ರತಿಭಟನೆ

ಗುವಾಹಟಿ: ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ಗುರುವಾರವೂ ಪ್ರತಿಭಟನೆಗಳು ನಡೆದಿವೆ.

ಮಸೂದೆಯನ್ನು ಖಂಡಿಸಿ ಇಂಡಿಜೀನಿಯಸ್‌ ನ್ಯಷನಲಿಸ್ಟ್‌ ಪಾರ್ಟಿ ಆಫ್‌ ತ್ವಿಪ್ರಾ (ಐಎನ್‌ಪಿಟಿ) 12 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು. ಅದರ ಅಂಗವಾಗಿ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ಸಂಚಾರವನ್ನು ತಡೆದಿದ್ದಾರೆ. ಅಸ್ಸಾಂನಲ್ಲೂ ಹಲವು ಸಂಘಟನೆಗಳು ಇದೇ ರೀತಿಯ ಪ್ರತಿಭಟನೆ ನಡೆಸಿದ್ದರಿಂದ ಅನೇಕ ರೈಲುಗಳನ್ನು ರದ್ದುಪಡಿಸಬೇಕಾಯಿತು.

ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ದಿ ಆಲ್‌ ಅಸ್ಸಾಂ ಸ್ಟೂಡೆಂಟ್ಸ್‌ ಯೂನಿಯನ್‌ ಹಾಗೂ ಇತರ 30 ಸಂಘಟನೆಗಳು ನಿರ್ಧರಿಸಿವೆ. ಪ್ರತಿಭಟನೆಯ ತೀವ್ರತೆಯನ್ನು ಮನಗಂಡ ರಾಜ್ಯದ ಸಚಿವ, ಬಿಜೆಪಿ ಮುಖಂಡ ಹಿಮಂತ ಬಿಸ್ವ ಶರ್ಮ ‘ಸ್ಥಳೀಯ ಸಮುದಾಯದವರ ಹಿತವನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

***

‘ಯಾರ ವಿರುದ್ಧವೇ ಆಗಲಿ, ಯಾವುದೇ ರೂಪದ ತಾರತಮ್ಯವನ್ನು ಕಾಂಗ್ರೆಸ್‌ ಸಹಿಸುವುದಿಲ್ಲ. ಆದ್ದರಿಂದ ಪೌರತ್ವ (ತಿದ್ದುಪಡಿ) ಮಸೂದೆಯನ್ನು ನಮ್ಮ ಪಕ್ಷವು ವಿರೋಧಿಸಲಿದೆ’
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.