ADVERTISEMENT

ಹೊತ್ತಿ ಉರಿಯುತ್ತಿದೆ ದೆಹಲಿ: ಹಿಂಸಾಚಾರಕ್ಕೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ

ಏಜೆನ್ಸೀಸ್
Published 25 ಫೆಬ್ರುವರಿ 2020, 12:41 IST
Last Updated 25 ಫೆಬ್ರುವರಿ 2020, 12:41 IST
ಖಾಜುರಿ ಖಾಸ್ ಪ್ರದೇಶದಲ್ಲಿ ಪ್ರದೇಶದಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವುದು –ಎಎನ್‌ಐ ಚಿತ್ರ
ಖಾಜುರಿ ಖಾಸ್ ಪ್ರದೇಶದಲ್ಲಿ ಪ್ರದೇಶದಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವುದು –ಎಎನ್‌ಐ ಚಿತ್ರ   
""

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಆರಂಭಗೊಂಡಿರುವ ಹಿಂಸಾಚಾರ ಮಂಗಳವಾರ ತಾರಕಕ್ಕೇರಿದೆ.

ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಂದು ಐವರು ಮೃತಪಟ್ಟಿದ್ದಾರೆ. ಇದರೊಂದಿಗೆ, ಈವರೆಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 150 ಜನ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದುಗುರು ತೇಗ್ಬಹದ್ದೂರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಪತ್ರಕರ್ತರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಸುದ್ದಿವಾಹಿನಿಯೊಂದರ ಇಬ್ಬರು ಪತ್ರಕರ್ತರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಖಾಜುರಿ ಖಾಸ್ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ತುರ್ತು ಕಾರ್ಯಪಡೆ ಪಥಸಂಚಲನ ನಡೆಸಿದ್ದು, ಶಾಂತಿ ಕಾಪಾಡಲು ಪ್ರಯತ್ನ ನಡೆಸಿವೆ. ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ.ಈಶಾನ್ಯ ದೆಹಲಿಯಲ್ಲಿ ಅರೆಸೇನಾ ಪಡೆಗಳ 35 ತುಕಡಿಗಳನ್ನು ನಿಯೋಜಿಸಲಾಗಿದೆ.

ಪೊಲೀಸ್ ಸಿಬ್ಬಂದಿ ಮತ್ತು ತುರ್ತು ಕಾರ್ಯಪಡೆಯಿಂದ ಪಥಸಂಚಲನ

ಈಶಾನ್ಯ ದೆಹಲಿಯಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಹೆಡ್‌ಕಾನ್ಸ್‌ಟೆಬಲ್ ಸೇರಿ ನಾಲ್ವರು ಮೃತಪಟ್ಟಿದ್ದರು. ಘರ್ಷಣೆಯಲ್ಲಿ ಮೃತಪಟ್ಟ ನಾಲ್ವರು ನಾಗರಿಕರ ದೇಹಗಳ ಮೇಲೆ ಗುಂಡೇಟಿನ ಕುರುಹುಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದರು.

ಗಾಯಾಳುಗಳ ಭೇಟಿ ಮಾಡಿದ ಕೇಜ್ರಿವಾಲ್:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರುಗುರು ತೇಗ್ಬಹದ್ದೂರ್ ಆಸ್ಪತ್ರೆಗೆ ತೆರಳಿ ಸೋಮವಾರದ ಗಲಭೆಯಲ್ಲಿ ಗಾಯಗೊಂಡಿದ್ದವರನ್ನುಭೇಟಿ ಮಾಡಿಸಾಂತ್ವನ ಹೇಳಿದ್ದಾರೆ.

ಶಾಂತಿ ಕಾಪಾಡಲು ಕಾಂಗ್ರೆಸ್ ಮನವಿ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಎಲ್ಲರೂ ಖಂಡಿಸಬೇಕು ಮತ್ತು ಶಾಂತಿ ಕಾಪಾಡಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದೆ.

ಕೆಲವು ಕೋಮು ಶಕ್ತಿಗಳು ರಾಜಕೀಯ ಲಾಭಕ್ಕಾಗಿ ಧರ್ಮಗಳ ಮಧ್ಯೆ ಒಡಕು ತಂದಿಡುತ್ತಿವೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ದೆಹಲಿಯಲ್ಲಿ ಕಾನೂನು–ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಸರ್ಕಾರಕ್ಕೆ ನೆರವಾಗಲಿದ್ದಾನೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.