ADVERTISEMENT

ಜಾಮಿಯಾ ಹಿಂಸಾಚಾರ: ಕಾಂಗ್ರೆಸ್‌ ಮಾಜಿ ಶಾಸಕ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ

ಪಿಟಿಐ
Published 18 ಡಿಸೆಂಬರ್ 2019, 7:46 IST
Last Updated 18 ಡಿಸೆಂಬರ್ 2019, 7:46 IST
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದ್ದ ಪ್ರತಿಭಟನೆಯ ಸಂಗ್ರಹ ಚಿತ್ರ
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದ್ದ ಪ್ರತಿಭಟನೆಯ ಸಂಗ್ರಹ ಚಿತ್ರ   

ನವದೆಹಲಿ:ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಮಾಜಿ ಶಾಸಕ ಆಸಿಫ್ ಖಾನ್ ಸೇರಿದಂತೆ 7 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸ್ಥಳೀಯ ರಾಜಕಾರಣಿಗಳಾದ ಆಶು ಖಾನ್, ಮುಸ್ತಫಾ, ಹೈದರ್, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ) ಸದಸ್ಯ ಚಂದನ್ ಕುಮಾರ್, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್‌ ಇಂಡಿಯಾ (ಎಸ್‌ಐಒ) ಸದಸ್ಯ ಆಸಿಫ್ ತನ್ಹಾ ಮತ್ತು ಎಎಪಿ ವಿದ್ಯಾರ್ಥಿ ಸಂಘಟನೆ ‘ಛಾತ್ರಾ ಯುವ ಸಂಘರ್ಷ ಸಮಿತಿ’ಯ (ಸಿವೈಎಸ್‌ಎಸ್) ನಾಯಕಕಾಸಿಮ್ ಉಸ್ಮಾನಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲೇನಿದೆ?:‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಸಂಸತ್ ಮತ್ತು ರಾಷ್ಟ್ರಪತಿ ಭವನದವರೆಗೆ ಹಲವು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸುವ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಹೀಗಾಗಿಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಡಿ.15ರಂದು ಸಂಜೆ 3 ಗಂಟೆಗೆ ಮಹಿಳೆಯರೂ ಸೇರಿದಂತೆ ಕೆಲವು ಪ್ರತಿಭಟನಾಕಾರರುವಿಶ್ವವಿದ್ಯಾಲಯದ ಬಳಿಯಿಂದ ಬಂದಿದ್ದರು. ಆಸಿಫ್ ಮತ್ತುಆಶು ಖಾನ್ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರನ್ನು ಪ್ರಚೋದಿಸುತ್ತಿದ್ದರು.ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ಮಥುರಾ ರಸ್ತೆಯತ್ತ ಸಾಗುತ್ತಿದ್ದರು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ಕೆಲವರು ದೆಹಲಿ ಸಾರಿಗೆ ಸಂಸ್ಥೆಯ ಬಸ್‌ಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಪ್ರತಿಭಟನೆ ಹಿಂಸೆಗೆ ತಿರುಗಿತ್ತು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಪ್ರತಿಭಟನಾಕಾರರು ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದರು. ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಪೊಲೀಸರು ಮನವಿ ಮಾಡುತ್ತಲೇ ಇದ್ದರು. ಇದ್ಯಾವುದಕ್ಕೂ ಸೊಪ್ಪುಹಾಕದ ಪ್ರತಿಭಟನಾಕಾರರು ವಿವಿ ಬಳಿ ಇದ್ದ ಆಂಬುಲೆನ್ಸ್‌ ಅನ್ನೂ ಧ್ವಂಸಗೊಳಿಸಿದ್ದರು. ಇದಾದ ನಂತರ ಗುಂಪನ್ನು ಚದುರಿಸುವ ಸಲುವಾಗಿ ಪೊಲೀಸರು ಆಶ್ರುವಾಯು ಸಿಡಿಸಿದ್ದರು. ವಿವಿಯ 4, 7 ಮತ್ತು 8ನೇ ಗೇಟ್ ಒಳಗಡೆಯಿಂದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು. ಕೊನೆಗೆ, ಪರಿಸ್ಥಿತಿ ನಿಯಂತ್ರಿಸಲು ಬೇರೆ ದಾರಿ ಕಾಣದೆ ಪೊಲೀಸರು ವಿವಿ ಆವರಣದ ಒಳ ಪ್ರವೇಶಿಸಿದ್ದರು. ಆ ಸಂದರ್ಭದಲ್ಲಿ ಅನೇಕ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ತಿಕೋನಾ ಪಾರ್ಕ್ ಮತ್ತು ಝಾಕಿರ್ ನಗರ್ ಧಲನ್ ಪೊಲೀಸ್ ಬೂತ್‌ಗಳನ್ನೂ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದರು. ಸುಮಾರು 78–80 ದ್ವಿಚಕ್ರವಾಹನಗಳಿಗೂ ಪ್ರತಿಭಟನಾಕಾರರು ಹಾನಿ ಎಸಗಿದ್ದರು’ ಎಂದೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.