ADVERTISEMENT

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ: ಅಮಿತ್ ಶಾ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:40 IST
Last Updated 9 ಡಿಸೆಂಬರ್ 2019, 13:40 IST
   

ನವದೆಹಲಿ: ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಧರ್ಮದ ಆಧಾರದಲ್ಲಿ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆ (2019)ಗೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಮಸೂದೆ ಪರವಾಗಿ 293 ಸದಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧವಾಗಿ 82 ಮತಗಳು ಚಲಾವಣೆಯಾದವು.

ಇಂದು ಬೆಳಗ್ಗೆ ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಸೂದೆಯನ್ನು ಮಂಡಿಸಿದರು. ಲೋಕಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ ಮತದಾನದ ನಂತರ ಮಸೂದೆಯನ್ನು ಚರ್ಚೆಗೆ ಒಳಪಡಿಸಲಾಯಿತು.

ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೆ, ಅಮಿತ್ ಶಾ ಮಸೂದೆಯನ್ನು ಸಮರ್ಥಿಸಿಕೊಂಡರು.

ADVERTISEMENT

ಈ ಮಸೂದೆಯ ಹಿಂದೆ ಯಾವುದೇ ರಾಜಕೀಯ ಅಜೆಂಡಾಗಳಿಲ್ಲ. ಹಾಗಾಗಿ ಅನ್ಯಾಯವಾಗುತ್ತಿರುವ ಬಗ್ಗೆ ಯಾರಿಂದಲೂ ಪ್ರಶ್ನೆ ಉದ್ಭವಿಸುವುದಿಲ್ಲ. ಕ್ರೀಡಾಪಟುಗಳಿಗೆ ಈ ಮಸೂದೆಯಿಂದ ತೊಂದರೆಯಾಗುವುದಿಲ್ಲ, ಯಾವುದೇ ಕ್ರೀಡಾಪಟುವಿಗೆ ಅಭ್ಯಾಸದ ಸಮಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಿದರು.

1947ರ ದೇಶ ವಿಭಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ಧರ್ಮಾಧಾರಿತವಾಗಿ ಭಾರತವನ್ನು ವಿಭಜಿಸಿದೆ. ಆಗ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸದೇ ಇದ್ದಿದ್ದರೆ ಇಂದು ತಿದ್ದುಪಡಿ ಮಸೂದೆಯ ಅವಶ್ಯಕತೆ ಇರುತ್ತಿರಲಿಲ್ಲ. ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ದೇಶವನ್ನು ಒಡೆದಿದೆ ಹೊರತು ನಾವಲ್ಲ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತನಾಡಿ, ಧರ್ಮದಲ್ಲಿ ನಂಬಿಕೆ ಉಳ್ಳವರು ರಾಷ್ಟ್ರೀಯತೆಯನ್ನು ನಿರ್ಧರಿಸಿಕೊಳ್ಳಬೇಕು. ಅದು ಪಾಕಿಸ್ತಾನದ ಯೋಚನೆಯಾಗಿತ್ತು.ಈ ಮಸೂದೆಯು ಇತರ ಧರ್ಮಗಳಿಗೆ ಸೇರಿದ ವ್ಯಕ್ತಿಗಳನ್ನು ಹೊರತುಪಡಿಸಿ ಕೇವಲ ಆರು ಧರ್ಮಗಳ ವ್ಯಕ್ತಿಗಳಿಗೆ ಪೌರತ್ವವನ್ನು ಪಡೆಯಲು ಅವಕಾಶ ನೀಡುವ ಮೂಲಕ ಧಾರ್ಮಿಕ ತಾರತಮ್ಯದ ಕಲ್ಪನೆಯನ್ನು ಅನುಮೋದಿಸುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾ, ಈ ಉದ್ದೇಶಿತ ಕಾನೂನು ಸಂವಿಧಾನದ ಯಾವುದೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಮತ್ತು ಈ ತಿದ್ದುಪಡಿ ಮಸೂದೆ ದೇಶದ ಅಲ್ಪಸಂಖ್ಯಾತರ ವಿರುದ್ಧವಾಗಿ ಶೇಕಡಾ 0.001ರಷ್ಟು ಕೂಡ ಇಲ್ಲ ಎಂದರು.

ಆರು ದಶಕಗಳ ಹಳೆಯ ಪೌರತ್ವ ತಿದ್ದುಪಡಿ ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಭಾರತದ ಪೌರತ್ವ ಪಡೆಯುವುದನ್ನು ಸುಲಭಗೊಳಿಸಿದೆ. 1955 ರ ಮೂಲ ಪೌರತ್ವ ಕಾಯ್ದೆಯು ಭಾರತದ ಪೌರತ್ವ ಪಡೆಯ ಬಯಸುವ ವ್ಯಕ್ತಿಗಳು ಕಳೆದ 14 ವರ್ಷಗಳಲ್ಲಿ 11 ವರ್ಷಗಳಿಂದ ದೇಶದಲ್ಲಿ ವಾಸವಾಗಿರಬೇಕು ಎಂದು ಹೇಳಿದೆ. ಆದರೆ ಈ ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಮೇತರ ಅರ್ಜಿದಾರರಿಗೆ ಆ ಅವಧಿಯನ್ನು ಐದು ವರ್ಷಗಳಿಗೆ ಇಳಿಸಿದೆ ಮತ್ತು ಸರ್ಕಾರದ ಕ್ರಮದಿಂದ ವಿನಾಯಿತಿ ನೀಡುತ್ತದೆ.

ಪೌರತ್ವ(ತಿದ್ದುಪಡಿ)ಮಸೂದೆ 2019ರ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ವಲಸೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ನಾಗರಿಕತ್ವ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.